ಬೆಂಗಳೂರು, ಏ. 20 (DaijiworldNews/HR): ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದೇ ಸಂವಿಧಾನ ಬಾಹಿರವಾಗಿದ್ದು, ರಾಜ್ಯಪಾಲರಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ" ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೊನಾ ನಿಯಂತ್ರಣ ಮತ್ತು ಬೆಂಗಳೂರು ಲಾಕ್ ಡೌನ್ ಸಂಬಂಧಿಸಿದಂತೆ ರಾಜ್ಯಪಾಲ ವಜುಭಾಯಿ ವಾಲಾ ಸರ್ವಪಕ್ಷ ಸಭೆ ಕರೆದಿದ್ದು, ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, "ರಾಜ್ಯಪಾಲರು ಕರೆದ ಸಭೆಗೆ ಗೌರವದಿಂದ ಭಾಗಿಯಾಗಿದ್ದೇವೆ. ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪಕ್ಕೆ ರಾಜ್ಯಪಾಲರಿಗೆ ಅಧಿಕಾರವಿಲ್ಲ. ಅವರು ಸರ್ಕಾರಕ್ಕೆ ಈ ರೀತಿ ಸಭೆ ನಡೆಸಿ ಎಂದು ಸೂಚನೆ ನೀಡಬಹುದು" ಎಂದರು.
"ನವೆಂಬರ್ ನಲ್ಲೇ ತಜ್ಞರು ಕೊರೊನಾ ಸೋಂಕಿನ ಬಗ್ಗೆ ವರದಿಯನ್ನು ನೀಡಿದ್ದು, ತಜ್ಞರ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. 2 ನೇ ಅಲೆ ಬಗ್ಗೆ ಮಾಹಿತಿ ಇದ್ದರೂ ಕೂಡ ಸರ್ವ ಪಕ್ಷ ಸಭೆ ಕರೆಯದೇ ಇರುವುದು ಸರ್ಕಾರದ ತಪ್ಪು" ಎಂದಿದ್ದಾರೆ.
ಇನ್ನು ಮೊದಲೇ ಜಾತ್ರೆ ಸಮಾರಂಭಗಳಿಗೆ ನಿರ್ಬಂಧ ಹೇರಬೇಕಿತ್ತು. ಮೊದಲೇ ಇವುಗಳನ್ನೆಲ್ಲ ನಿರ್ಬಂಧಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾನು, ಯಡಿಯೂರಪ್ಪ, ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಭಾಗಿಯಾಗಿದ್ದೆವು. ಉಪ ಚುನಾವಣೆ ನಡೆಯದಿದ್ರೆ ಸಂವಿಧಾನ ಬಿಕ್ಕಟ್ಟು ಆಗುತ್ತಿರಲಿಲ್ಲ. ಪ್ರಧಾನಿಗಳು ಕೂಡ ಈ ಬಗ್ಗೆ ಗಮನ ಕೊಡಲಿಲ್ಲ. ನನಗಿರುವ ಮಾಹಿತಿ ಪ್ರಕಾರ ಸಿಎಂ ಅವರ ಮಾತನ್ನು ಆರೋಗ್ಯ ಸಚಿವರು ಕೇಳುತ್ತಿಲ್ಲ. ಸಿಎಂ ಮತ್ತು ಸುಧಾಕರ್ ನಡುವೆ ಹೊಂದಾಣಿಕೆ ಇಲ್ಲ ಎಂದು ಹೇಳಿದ್ದಾರೆ.