ಬೆಂಗಳೂರು, ಏ. 20 (DaijiworldNews/HR): ಕೊರೊನಾ ಸೋಂಕಿನ ಎರಡನೇ ಅಲೆ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಫಲಿತಾಂಶ ಪ್ರಕಟಣೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ತಿಳಿಸಿದ್ದು, ಇದೀಗ ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಒಂದರಿಂದ ಏಳು/ಎಂಟನೇ ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಿಗೆ ಮೇ 1ರಿಂದ ಜೂನ್ 14ರವರಗೆ ಬೇಸಿಗೆ ರಜೆ. ಜೂ. 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಮತ್ತು ಫ್ರೌಢ ಶಾಲೆಗಳಲ್ಲಿರುವ 8 ಮತ್ತು 9ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗೆ ಮೇ 1ರಿಂದ ಜುಲೈ 14ರವರೆಗೆ ಬೇಸಿಗೆ ರಜೆ. ಪ್ರೌಢಶಾಲೆಗಳ ಶಿಕ್ಷಕರಿಗೆ ಜೂ. 15ರಿಂದ ಜುಲೈ 14ರವರೆಗೆ ಬೇಸಿಗೆ ರಜೆ ನೀಡಲಾಗಿದ್ದು, ಜುಲೈ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ಆದರೆ, ಈ ವೇಳಾಪಟ್ಟಿ ಕೇವಲ ತಾತ್ಕಾಲಿಕವಾಗಿದ್ದು, ಕೊರೊನಾ ಸೋಂಕಿನ ಸ್ಥಿತಿಗತಿಗೆ ಅನುಗುಣವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಶಿಕ್ಷಣ ಇಲಾಖೆ, ಜೂನ್ 21ರಿಂದ ಜುಲೈ 5ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಇನ್ನು ಒಂದರಿಂದ ಐದನೇ ತರಗತಿವರೆಗೆ ಶಾಲಾ ಹಂತದಲ್ಲಿ ಮಕ್ಕಳ ಪ್ರಗತಿ ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು.
6ರಿಂದ 9ನೇ ತರಗತಿಗಳ ಮಕ್ಕಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುತಿದ್ದ್ದು ಜೊತೆಗೆ ದೂರದರ್ಶನ ಚಂದನ ವಾಹಿನಿಯ ಸಂವೇದ, ಇ-ಕಲಿಕಾ, ಆನ್ಲೈನ್ ಸೇರಿದಂತೆ ವಿವಿಧ ಪ್ರಕಾರದಲ್ಲಿ ಪಾಠ ಪ್ರವಚನ ಆಲಿಸಿರುವ ಹಿನ್ನಲೆಯಲ್ಲಿ ಕಲಿಕಾ ಪೂರಕ ಚಟುವಟಿಕೆ, ಪ್ರಾಜೆಕ್ಟ್ ಚಟುವಟಿಕೆಗಳ ನೆಲೆಯಲ್ಲಿ ಈಗಾಗಲೇ ಕೈಗೊಂಡಿರುವ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ನಿರ್ವಹಿಸಿದ ದಾಖಲೆಗಳನ್ನಾಧರಿಸಿ ಪಡೆದ ಅಂಕಗಳನ್ನು 100ಕ್ಕೆ ವೃದ್ಧಿಸಿ ಶ್ರೇಣಿ ನಮೂದಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುತ್ತದೆ.