ನವದೆಹಲಿ, ಏ 20(DaijiworldNews/MS): ಕೊರೊನಾ ನಿಯಂತ್ರಣಕ್ಕೆ ೫ ನಗರಗಳನ್ನು ಲಾಕ್ ಡೌನ್ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದ್ದ ಆದೇಶವನ್ನು ಸುಪ್ರಿಂಕೋರ್ಟ್ ತಡೆಹಿಡಿದಿದೆ. ಲಖನೌ, ಅಲಹಾಬಾದ್, ಕಾನ್ಪುರ್, ವಾರಾಣಸಿ ಮತ್ತು ಗೋರಖ್ಪುರದಲ್ಲಿ ಒಂದು ವಾರದವರೆಗೆ ಲಾಕ್ಡೌನ್ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶಕ್ಕೆ ಆದೇಶ ನೀಡಿದ್ದನ್ನು ಪ್ರಶ್ನಿಸಿ, ಸರ್ಕಾರ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು.
ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲಹಾಬಾದ್ ಹೈ ಕೋರ್ಟ್ ಪ್ರಯಾಗ್ ರಾಜ್, ಲಕ್ನೋ, ವಾರಣಾಸಿ, ಕಾನ್ಫುರ ಮತ್ತು ಗೋರಖ್ಪುರದಲ್ಲಿ ಲಾಕ್ಡೌನ್ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಏ. 26ರವರೆಗೆ ಎಲ್ಲಾ ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ರೆಸ್ಟೋರೆಂಟ್, ಹೋಟೆಲ್, ತರಕಾರಿ ಅಂಗಡಿ ಮತ್ತು ಕಮರ್ಷಿಯಲ್ ಶಾಪ್ಗಳನ್ನು ಮುಚ್ಚುವಂತೆ ತಿಳಿಸಿತ್ತು. ಸೋಮವಾರ ರಾತ್ರಿಯಿಂದಲೇ ಈ ಲಾಕ್ಡೌನ್ ಜಾರಿಗೆ ಬರುವಂತೆ ಸೂಚಿಸಿತ್ತು.ಇಂತಹ ಸಮಯದಲ್ಲಿ ಸಾರ್ವಜನಿಕ ಓಡಾಟವನ್ನು ಪರೀಕ್ಷಿಸದಿರಲು ಜನಪ್ರಿಯ ಸರ್ಕಾರಕ್ಕೆ ರಾಜಕೀಯ ಒತ್ತಡಗಳಿದ್ದರೆ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಾವು ಕೂಡ ಸುಮ್ಮನೆ ಕೂರಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಆರೋಗ್ಯ ನಮ್ಮ ಮೊದಲ ಆದ್ಯತೆ. ಕೆಲವರು ನಿರ್ಲಕ್ಷ್ಯದಿಂದಾಗಿ ಸೋಂಕು ಹರಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು ಸಾಂವಿಧಾನಿಕ ಕರ್ತವ್ಯದಿಂದ ನಾವು ದೂರ ಉಳಿಯಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿತ್ತು
ಆದರೆ ಲಾಕ್ ಡೌನ್ ನಿರ್ದೇಶನ ಹೊರಡಿಸುವುದು ಅಲಹಾಬಾದ್ ಹೈಕೋರ್ಟ್ನ ವ್ಯಾಪ್ತಿಯಲ್ಲಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಸುಪ್ರಿಂ ಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ವಾದಿಸಿತ್ತು .ತುರ್ತು ಆಧಾರದ ಮೇಲೆ ಅರ್ಜಿ ವಿಚಾರಣೆ ನಡೆಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನೇತೃತ್ವದ ನ್ಯಾಯಪೀಠ ಸಮ್ಮತಿಸಿ ಅಲಹಾಬಾದ್ ಹೈಕೋರ್ಟ್ ನಿರ್ದೇಶನಕ್ಕೆ ತಡೆ ನೀಡಿದೆ.