ಬೆಂಗಳೂರು, ಏ.20 (DaijiworldNews/MB) : ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಸೋಮವಾರ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆ ನಡೆದಿದ್ದು ಈ ಸಂದರ್ಭ ಆಡಳಿತರೂಢ ಪಕ್ಷ ಬಿಜೆಪಿ ನಾಯಕರು ಹಾಗೂ ವಿಪಕ್ಷ ನಾಯಕರು ಪರಸ್ಪರ ವೈಯಕ್ತಿಕ ವಾಗ್ದಾಳಿಯಲ್ಲೇ ತೊಡಗಿದ್ದು ಕೊನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿ ನಾಯಕರುಗಳನ್ನು ಸಮಾಧಾನಪಡಿಸಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರ್ಚುವಲ್ ಲಿಂಕ್ ಮೂಲಕ ಸಭೆಯಲ್ಲಿ ಹಾಜರಿದ್ದರು.
ಕಾಂಗ್ರೆಸ್ ನಾಯಕರು ಸರ್ಕಾರದ ಕ್ರಮಗಳ ಬಗ್ಗೆ ವಾಗ್ದಾಳಿ ನಡೆಸಿದ್ದು, ಪರಿಸ್ಥಿತಿ ಕೈ ಮೀರಿದ ಬಳಿಕ ಸರ್ಕಾರ ಈಗ ಸಭೆ ಕರೆದಿದೆ. ಸರ್ಕಾರ ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಬರೀ ಕಾಂಗ್ರೆಸ್ ಕೊರೊನಾ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಹೇಳುತ್ತಾರೆ ಅಷ್ಟೇ ಎಂದು ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ದ ಕಿಡಿಕಾರಿದರು. ಬಳಿಕ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ವೈಯಕ್ತಿಕ ವಾಗ್ದಾಳಿ ನಡೆದಿದೆ.
ಸರ್ಕಾರ ನಮ್ಮ ಮಾತು ಸಲಹೆಯನ್ನು ಕೇಳುತ್ತಿಲ್ಲ. ವಿಪಕ್ಷದವರನ್ನು ದೂಷಿಸಲೆಂದೇ ಈ ಸಭೆ ಕರೆಯಲಾಗಿದೆ ಎಂದು ತೋರುತ್ತದೆ. ಸಭೆಯಿಂದ ಸರ್ಕಾರ ಯಾವುದೇ, ಉತ್ತರವಾಗಲಿ ಪರಿಹಾರವಾಗಲಿ ನೀಡಿಲ್ಲ. ಸಭೆ ಕೇವಲ ಕಣ್ಣೀರು ಒರೆಸುವ ತಂತ್ರವಾಗಿತ್ತು. ಸರ್ಕಾರ ಯಾವುದೇ ಉತ್ತರ ನೀಡದ ಕಾರಣ ನಾನು ಸಭೆಯಿಂದ ಹೊರನಡೆದೆ ಎಂದು ಕಾಂಗ್ರೆಸ್ ನಾಯಕ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಹಾಸಿಗೆ, ಆಕ್ಸಿಜನ್, ವೈದ್ಯಕೀಯ ಸೌಲಭ್ಯಗಳನ್ನು ಕೇಳಿಕೊಂಡು ನನ್ನ ಬಳಿ ಕ್ಷೇತ್ರದ ಜನರು ಬರುತ್ತಾರೆ. ಆದರೆ ನನಗೆ ನಮ್ಮ ಕ್ಷೇತ್ರದ ಜನರಿಗೆ ಸಹಾಯ ಮಾಡಲು ಆಗುತ್ತಿಲ್ಲ ಎಂಬ ಬೇಸರ ಉಂಟಾಗಿದೆ. ಯಾರೊಂದಿಗೆ ಈ ವಿಚಾರ ಮಾತನಾಡಬೇಕು, ಉಸ್ತುವಾರಿ ಹೊತ್ತವರು ಯಾರು ಎಂದೇ ತಿಳಿಯಲಾಗದ ಸ್ಥಿತಿಯಲ್ಲಿ ಈ ಸರ್ಕಾರದ ವ್ಯವಸ್ಥೆಯಿದೆ ಎಂದು ದೂರಿದ ಅವರು, ನಮ್ಮ ಸಹಾಯ ತಲುಪುವಷ್ಟರಲ್ಲಿ ಜನರು ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ವಿ.ಸೋಮಣ್ಣ ಅವರು ಕೃಷ್ಣ ಭೈರೇಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಆದರೆ ಬಳಿಕ ಮಾತನಾಡಿದ ಸಚಿವ ಅಶೋಕ್ ಅವರು, ಸರ್ಕಾರದ ಕೆಲಸಗಳಿಗೆ ವಿಪಕ್ಷ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಸಲಹೆ ನೀಡಿದ್ದಾರೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಮೂಲಕ ತದ್ವಿರುದ್ದ ಹೇಳಿಕೆ ನೀಡಿದ್ದಾರೆ.