ಬೆಂಗಳೂರು,ಏ. 20 (DaijiworldNews/HR): ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದ್ದು, ರಾಜ್ಯಪಾಲರು ಕರೆದಿರುವ ಸಭೆ ಕುರಿತು ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನನ್ನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥ್ಯವೇ ಅಥವಾ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನದ ಭಾಗವೇ"? ಎಂದಿದೆ.
"ಕೊರೊನಾ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿರುವ ಸರ್ಕಾರಕ್ಕೆ ವಿಪಕ್ಷಗಳನ್ನು ಎದುರಿಸುವ ಮುಖವಿಲ್ಲವೇ? ಅಥವಾ ಪರಿಸ್ಥಿತಿ ಎದುರಿಸಲಾಗದೆ ಕೈ ಚೆಲ್ಲಿದೆಯೇ? ಇಂತಹ ಮುಖಹೇಡಿ ಸರ್ಕಾರದಿಂದ ಜನರ ಜೀವ ಉಳಿಸುವುದು ಸಾಧ್ಯವಿಲ್ಲ" ಎಂದು ಹೇಳಿದೆ.
ಇನ್ನು "ಆಕ್ಸಿಜನ್ ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆ ಇದೆ, ಇದ್ದಿದ್ದೂ ಕಾಳ ಸಂತೆಯ ಪಾಲಾಗುತ್ತಿದೆ. ಹೀಗಿರುವಾಗ ಸರ್ಕಾರ ಕಾಳ ಸಂತೆಯನ್ನು ನಿಯಂತ್ರಿಸಿ, ಉತ್ಪಾದನೆ ಹೆಚ್ಚಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದನ್ನ ಬಿಟ್ಟು ವಾರ್ ರೂಮ್ ಎನ್ನುವ ಕಣ್ಣೊರೆಸುವ ಕೆಲಸದಿಂದ ನಯಾಪೈಸೆ ಉಪಯೋಗವಾಗುತ್ತಿಲ್ಲ" ಎಂದು ಟ್ವೀಟ್ ಮಾಡಿದೆ.