ದಂತೇವಾಡ, ಏ. 20 (DaijiworldNews/HR): ಭದ್ರತಾ ಪಡೆಗಳು ಛತ್ತೀಸ್ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಎಂಬಾತನನ್ನು ಎನ್ಕೌಂಟರ್ ಮಾಡಿ ಹತ್ಯೆಗೈದ ಘಟನೆ ನೀಲವಾಯಾ ಅರಣ್ಯದಲ್ಲಿ ಇಂದು ನಡೆದಿದೆ.
ಸಾಂಧರ್ಭಿಕ ಚಿತ್ರ
ಛತ್ತೀಸ್ಘಡದ ನೀಲವಾಯಾ ಅರಣ್ಯದಲ್ಲಿ ದಂತೇವಾಡ ಜಿಲ್ಲಾ ಮೀಸಲು ಪಡೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಛತ್ತೀಸ್ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ದಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ್, "ದಂತೇವಾಡ ಡಿಆರ್ಜಿಯೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ನೀಲವಾಯದ ಕಾಡಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾವೋವಾದಿ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿತ್ತು. ಮೃತ ಮಾವೋವಾದಿಯನ್ನು ನಟೋರಿಯಸ್ ನಕ್ಸಲ್ ನಾಯಕ ಕೋಸಾ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಮೃತ ನಕ್ಸಲ್ ನಾಯಕ ಕೋಸಾ ಕಳೆದ 15 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಮೂಲತಃ ನೀಲವಾಯದ ಮಲ್ಲಪಾರ ನಿವಾಸಿಯಾಗಿದ್ದ ಕೋಸಾ ಪ್ರಸ್ತುತ ಮಲಂಗೀರ್ ಪ್ರದೇಶ ಸಮಿತಿ ಸದಸ್ಯನಾಗಿದ್ದ ಮತ್ತು ಮಿಲಿಟರಿ ಗುಪ್ತಚರ ಉಸ್ತುವಾರಿ ವಹಿಸಿದ್ದ.
ಘಟನಾ ಸ್ಥಳದಲ್ಲಿ ಒಂದು 9 ಎಂಎಂ ಪಿಸ್ತೂಲ್, ಒಂದು ದೇಶೀ ನಿರ್ಮಿತ ಭರ್ಮಾರ್, 3 ಕೆಜಿ ಐಇಡಿ ಸ್ಫೋಟಕ, ಪಿಥೂಸ್, ಔಷಧಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.