ನವದೆಹಲಿ, ಏ.20 (DaijiworldNews/MB) : ಕಾರಿನಲ್ಲಿ ಮಾಸ್ಕ್ ಧರಿಸದೇ, ವೀಕೆಂಡ್ ಲಾಕ್ಡೌನ್ ಪಾಲಿಸದೇ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದೂ ಅಲ್ಲದೇ, ಪೊಲೀಸರಿಗೆ ಅವಾಜ್ ಹಾಕಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ನನ್ನ ಪತ್ನಿ ನನ್ನನ್ನು ಪ್ರಚೋದಿಸಿದ್ದಾಳೆ ಎಂದು ಪತ್ನಿ ಅಭಾ ಗುಪ್ತ ವಿರುದ್ದ ಪತಿ ಪಂಕಜ್ ದತ್ತ ಕಿಡಿಕಾರಿದ್ದಾರೆ.
ದೆಹಲಿಯ ದರಿಯಾಗಂಜ್ನಲ್ಲಿ ಕಾರಿನ ಒಳಗೆ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದ ಕಾರಣಕ್ಕೆ ಪೊಲೀಸರು ಅಭಾ ಗುಪ್ತ ಹಾಗೂ ಪಂಕಜ್ ದತ್ತ ದಂಪತಿಯನ್ನು ತಡೆದಿದ್ದರು. ಈ ದಂಪತಿಗಳ ಬಳಿ ಕರ್ಫ್ಯೂ ಪಾಸ್ ಕೂಡಾ ಇರಲಿಲ್ಲ. ತಪ್ಪನ್ನು ತಿದ್ದುಕೊಂಡು ಸೌಮ್ಯವಾಗಿ ವರ್ತಿಸುವ ಬದಲು ''ನಾನು ಇಲ್ಲಿಯೇ ನನ್ನ ಪತಿಗೆ ಕಿಸ್ ಮಾಡುತ್ತೇನೆ. ನೀವು ನನ್ನನ್ನು ಹೇಗೆ ತಡೆಯುತ್ತೀರಿ? ಕಾರ್ ಅನ್ನು ಏಕೆ ತಡೆದಿದ್ದೀರಿ?'' ಎಂದು ಪತ್ನಿ ಅಭಾ ಪೊಲೀಸರಿಗೆ ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಾರಿನಲ್ಲಿದ್ದಾಗಲೂ ಮಾಸ್ಕ್ ಧರಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ ಎಂದು ಪೊಲೀಸರು ಮಹಿಳೆಗೆ ತಿಳಿಸಿದರೂ ಕೂಡಾ ದಂಪತಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಘಟನೆಯ ನಂತರ, ಆರೋಪಿ ದಂಪತಿಗಳಾದ ಪಂಕಜ್ ದತ್ತಾ ಮತ್ತು ಅಭಾ ಗುಪ್ತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈಗ ಪತಿ ಪಂಕಜ್ ಎಲ್ಲಾ ತಪ್ಪುಗಳನ್ನು ತನ್ನ ಪತ್ನಿಯ ಮೇಲೆ ಹೊರೆಸಿದ್ದು, ''ಇಡೀ ಘಟನೆಗೆ ನನ್ನ ಪತ್ನಿಯೇ ಕಾರಣ. ನನ್ನ ಪತ್ನಿ ನನ್ನನ್ನು ಪ್ರಚೋದಿಸಿದಳು. ಅದು ಅವಳ ತಪ್ಪು'' ಎಂದು ಹೇಳಿದ್ದಾನೆ. ಇನ್ನು ದಂಪತಿಗಳು ಕಾರಿನಲ್ಲಿ ಮಾಸ್ಕ್ ಯಾಕೆ ಹಾಕಿಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಪಂಕಜ್, ''ನಾನು ಮಾಸ್ಕ್ ಹಾಕಲು ಮುಂದಾಗಿದ್ದೆ. ಆದರೆ ನನ್ನ ಪತ್ನಿ ನನಗೆ ಮಾಸ್ಕ್ ಹಾಕಲು ಬಿಟ್ಟಿಲ್ಲ'' ಎಂದು ದೂರಿದ್ದಾರೆ.
ಈ ಘಟನೆ ನಡೆಯುವುದಕ್ಕೂ ಮುನ್ನ ನಾನು ಹಾಗೂ ನನ್ನ ಪತ್ನಿ ಮಾಸ್ಕ್ ಹಾಕುವ ವಿಚಾರದಲ್ಲೇ ವಾಗ್ವಾದ ನಡೆಸುತ್ತಿದ್ದೆವು. ಇನ್ನು ತಾನು ಪೊಲೀಸರ ಹೆಸರನ್ನು ಕರೆದಿರುವುದನ್ನು ನಿರಾಕರಿಸಿರುವ ಪಂಕಜ್, ನನ್ನ ಪತ್ನಿ ಪೊಲೀಸರನ್ನು ನಿಂದಿಸಿದ್ದಾಳೆ ಎಂದು ಹೇಳಿದ್ದಾನೆ.
ನಿನ್ನೆ ದಂಪತಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಇಂದು ಮತ್ತೆ ಕೋರ್ಟ್ಗೆ ದಂಪತಿಯನ್ನು ಹಾಜರು ಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.