ಬೆಂಗಳೂರು,ಏ 20(DaijiworldNews/MS): ಕೊರೊನಾ ಎರಡನೇ ಅಲೆ ಬಲವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿದ್ದು, ಈ ಹಿನ್ನಲೆಯಲ್ಲಿ ಇಂದು ರಾಜ್ಯಪಾಲರ ವಿ.ಆರ್.ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ನಾಯಕರ ವರ್ಚುವಲ್ ಸಭೆ ನಡೆಯಲಿದ್ದು, ಅಂತಿಮವಾಗಿ ಬೆಂಗಳೂರು ಹಾಗೂ ರಾಜ್ಯದಾದ್ಯಂತ ಕೈಗೊಳ್ಳುವ ಕಠಿಣ ಕ್ರಮಗಳ ಬಗ್ಗೆ ಆದೇಶ ಹೊರ ಬೀಳಲುವ ಸಾಧ್ಯತೆ ಇದೆ.
ಸೋಮವಾರವಷ್ಟೇ ಕಂದಾಯ ಸಚಿವ ಅಶೋಕ್ ನಡೆಸಿದ ಬೆಂಗಳೂರು ವ್ಯಾಪ್ತಿಯ ಶಾಸಕರು ಸಂಸದರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಕೊರೋನಾ ನಿಯಂತ್ರಣಕ್ಕಾಗಿ 144 ಸೆಕ್ಷನ್ ವಿಧಿಸಬೇಕು. 4ಕ್ಕಿಂತ ಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಬೇಕು. ಆದರೆ, ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಬಾರದು. ಒಂದು ವೇಳೆ ಲಾಕ್ಡೌನ್ ಮಾಡಿದರೆ, ಪ್ರತಿ ಕುಟುಂಬಕ್ಕೆ ರೂ.25 ಸಾವಿರ ಹಣ ನೀಡಬೇಕೆಂದು ಒತ್ತಾಯಿಸಿದ್ದರು.
ಇನ್ನು ಇಂದು ನಡೆಯಲಿರುವ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಇನ್ನು ಹಲವು ನಾಯಕರು ಭಾಗಿಯಾಗಲಿದ್ದಾರೆ. ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೋವಿಡ್ ಸೋಂಕಿಗೊಳಗಾಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ಕಾರಣ ಆಸ್ಪತ್ರೆಯಿಂದಲೇ ವರ್ಚುವಲ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ತಾಂತ್ರಿಕ ಸಲಹ ಸಮಿತಿ ಅಧ್ಯಕ್ಷರು, ಸದಸ್ಯರು ಸಹ ಸಭೆಯಲ್ಲಿ ಭಾಗಿಯಾಗಲಿದ್ದಾರೆ