ಬೆಂಗಳೂರು,ಏ. 19 (DaijiworldNews/HR): ಕರ್ನಾಟಕ ಸರ್ಕಾರವು ನಾಳೆಯಿಂದ ಮೇ 3ರವರೆಗೆ ರಾಜ್ಯದಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ರ ತನಕ ರಾತ್ರಿ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ ಎಂದು ಬಹಿರಂಗಗೊಂಡಿರುವ ದಾಖಲೆಯನ್ನು ನಕಲಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಜಾರಿಯಲ್ಲಿರುವ ಈ ನೈಟ್ ಕರ್ಫ್ಯೂ ರಾಜ್ಯಕ್ಕೆ ಅನ್ವಯಿಸಲಿದ್ದು, ಸಾರ್ವಜನಿಕ ಸ್ಥಳದಲ್ಲಿ ಕಾರಣವಿಲ್ಲದೆ ಗುಂಪು ಸೇರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದ್ದು, ಶಾಲಾ ಕಾಲೇಜು, ಸಿನಿಮಾ ಹಾಲ್, ಜಿಮ್, ಮನರಂಜನಾ ಪಾರ್ಕ್, ಶಾಪಿಂಗ್ ಕಾಂಪ್ಲೆಕ್ಸ್ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ವೈರಲ್ ಆದ ಪತ್ರದಲ್ಲಿ ಮಾಹಿತಿಯಿತ್ತು.
ಆದರೆ ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಕಾರ್ಯದರ್ಶಿ ರವಿಕುಮಾರ್, "ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಆದರೆ ಯಾರೋ ಈ ಮಾರ್ಗಸೂಚಿ ಬಹಿರಂಗಗೊಳಿಸಿದ್ದಾರೆ" ಎಂದಿದ್ದಾರೆ.
ಇನ್ನು ನಾಳೆ ನಡೆಯಲಿರುವ ಸರ್ವಪಕ್ಷ ಸಭೆಯ ಬಳಿಕ ರಾಜ್ಯದಲ್ಲಿ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದ್ದು, ಕಳೆದ ವರ್ಷದ ಮಾರ್ಗಸೂಚಿಯನ್ನೇ ಯಾರೋ ದಿನಾಂಕ ಬದಲಿಸಿ ಹರಿಬಿಟ್ಟಿದ್ದಾರೆ. ಕಿಡಿಗೇಡಿಗಳ ಕೃತ್ಯದ ಬಗ್ಗೆ ತನಿಖೆಗೆ ಆದೇಶಿಸುತ್ತೇವೆ " ಎಂದು ಹೇಳಿದ್ದಾರೆ.