ಬೆಂಗಳೂರು, ಏ. 19 (DaijiworldNews/HR): ವಿದೇಶದಿಂದ ಮಹಿಳೆಯರನು ಕಳ್ಳ ಸಾಗಣೆ ಮೂಲಕ ಕರೆ ತಂದು ಸ್ಥಳೀಯ ಆಧಾರ್ ಕಾರ್ಡ್ ಸೃಷ್ಟಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಂಧೆ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ನೌಶದ್ ಆಲಿ, ರಿಯಾಜುಲ್ ಶೇಖ್, ಸಮೀರ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ವಿದೇಶಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದು, ಖಚಿತ ಮಾಹಿತಿ ಮೇರೆಗೆ ಎಸಿಪಿ ಎಸ್. ಎಂ. ನಾಗರಾಜ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಅಂಜುಮಾಲ ಟಿ. ನಾಯಕ್ ಮತ್ತು ತಂಡ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು ಈ ವೇಳೆ ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದು ಬಾಡಿಗೆ ಮನೆಯಲ್ಲಿ ದಂಧೆ ನಡೆಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಇನ್ನು ಈ ಸಂಬಂಧ ಇಬ್ಬರು ಬಾಂಗ್ಲಾ ಮೂಲದ ಮಹಿಳೆಯರನ್ನು ರಕ್ಷಣೆ ಮಾಡಿ ರಾಜ್ಯ ನಿಲಯಕ್ಕೆ ಒಪ್ಪಿಸಿದ್ದು, ಆರೋಪಿಗಳ ಬಳಿ ಹನ್ನೊಂದು ಆಧಾರ್ ಕಾರ್ಡ್ ಸಿಕ್ಕಿದ್ದು, ಪರಿಶೀಲಿಸಿದಾಗ ಅದು ನಕಲಿ ಐಡಿ ಕಾರ್ಡ್ ಎಂಬ ಆತಂಕಕಾರಿ ಗೊತ್ತಾಗಿದೆ.
ಹೊರ ದೇಶದ ಮಹಿಳೆಯರಿಗೆ ನಕಲಿ ಆಧಾರ್ ಕಾರ್ಡ್ ತಯಾರಿಸಿ ಭಾರತೀಯರು ಅಂತ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇವರ ನಕಲಿ ದಾಖಲೆಗಳ ಸೃಷ್ಟಿ ಜಾಲ ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.