ನವದೆಹಲಿ, ಏ.19 (DaijiworldNews/MB) : ಕೇಂದ್ರ ಸರ್ಕಾರ ಕೊರೊನಾ ಸೋಂಕನ್ನು ನಿರ್ವಹಣೆ ಮಾಡುತ್ತಿರುವ ಬಗ್ಗೆ ಟೀಕೆ ವ್ಯಕ್ತಪಡಿಸಿ ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ಈ ಪತ್ರದ ಬಗ್ಗೆ ಆರೋಗ್ಯ ಸಚಿವ ಹರ್ಷವರ್ಧನ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ದೇಶವು 'ಅಭೂತಪೂರ್ವ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ' ಎಂದು ಭಾನುವಾರ ಮೋದಿಗೆ ಪತ್ರ ಬರೆದಿರುವ ಡಾ.ಮನ್ ಮೋಹನ್ ಸಿಂಗ್ ಅವರು ಕೊರೊನಾ ಲಸಿಕೆ ಪ್ರಮಾಣಕ್ಕಾಗಿ ಸರ್ಕಾರ ನೀಡಿರುವ ಆದೇಶಗಳ ಬಗ್ಗೆ ಸಾರ್ವಜನಿಕ ವಿವರವನ್ನು ನೀಡಬೇಕು. ಅವುಗಳನ್ನು ಪಾರದರ್ಶಕವಾಗಿ ವಿತರಿಸುವ ತಂತ್ರವನ್ನು ಸೂಚಿಸಬೇಕು ಎಂದು ಹೇಳಿದ್ದರು.
ಈ ಪತ್ರದ ವಿಚಾರದಲ್ಲಿ ಮನಮೋಹನ್ ಸಿಂಗ್ ಅವರ ವಿರುದ್ದ ವಾಗ್ದಾಳಿ ನಡೆಸಿರುವ ಹರ್ಷವರ್ಧನ್ ಅವರು, ''ಹಿರಿಯ ಕಾಂಗ್ರೆಸ್ ಮುಖಂಡರು ತನ್ನದೇ ನಿಲುವಿಗೆ ದೊಡ್ಡ ಅಪಚಾರ ಮಾಡಿದ್ದಾರೆ. ಸಿಂಗ್ ಅವರು ಕೊರೊನಾ ವಿರುದ್ದದ ಹೋರಾಟದಲ್ಲಿ ಲಸಿಕೆಯ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಒಪ್ಪುವ ವಿಚಾರ. ಆದರೆ ಕೆಲವು ಕಾಂಗ್ರೆಸ್ ವಿರೋಧಿ ಆಡಳಿತವಿರುವರ ರಾಜ್ಯಗಳಲ್ಲಿ ಹಿರಿಯ ನಾಗರಿಕರು, ಮುಂಚೂಣಿ ಕಾರ್ಯಕರ್ತರಿಗೂ ಕೂಡಾ ಲಸಿಕೆ ಹಾಕಿಲ್ಲ. ವಿಜ್ಞಾನಿಗಳಿಗೆ, ಲಸಿಕೆ ತಯಾರಿಕರಿಗೆ ಧನ್ಯವಾದವನ್ನೂ ಹೇಳಿಲ್ಲ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಜನರಿಗೆ ಲಸಿಕೆ ಹಾಕಿಸುವ ಬದಲು ಲಸಿಕೆ ಮೇಲ ಅನುಮಾನ ವ್ಯಕ್ತಪಡಿಸುವುದರಲ್ಲೇ ಬ್ಯುಸಿಯಾಗಿದೆ'' ಎಂದು ಟಾಂಗ್ ನೀಡಿದ್ದಾರೆ.
''ಮಾಜಿ ಪ್ರಧಾನಿ ನೀಡಿದ ಕೆಲವು ಸಲಹೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ನೀವು ಏಪ್ರಿಲ್ 18 ರಂದು ಈ ಸಲಹೆಯನ್ನು ನೀಡಿದ್ದೀರಿ. ಆದರೆ ಈಗಾಗಲೇ ಏಪ್ರಿಲ್ 11 ರಂದು ಅಂದರೆ ಒಂದು ವಾರದ ಮೊದಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ'' ಎಂದು ತಿರುಗೇಟು ನೀಡಿದ್ದಾರೆ.
''ಜನರಿಗೆ ಸುಳ್ಳು ಹೇಳಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವಂತೆ ಮಾಡಿ ದೇಶವಾಸಿಗಳ ಜೀವನದೊಂದಿಗೆ ಕಾಂಗ್ರೆಸ್ ಆಟವಾಡಿದೆ'' ಎಂದು ಆರೋಪಿಸಿದ ಸಚಿವರು, ''ಕಾಂಗ್ರೆಸ್ ಆಡಳಿತ ರಾಜ್ಯಗಳು ಎರಡನೇ ಕೊರೊನಾ ಅಲೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಹರಡಿದ ಸುಳ್ಳು ಹಾಗೂ ನಕಾರಾತ್ಮಕ ಸುದ್ದಿ ತಲೆಕೆಡಿಸಿಕೊಳ್ಳದೆ ಅವರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು'' ಎಂದು ಕೂಡಾ ಹರ್ಷವರ್ಧನ್ ಹೇಳಿದ್ದಾರೆ.