ಕೊಚ್ಚಿ, ಏ.19 (DaijiworldNews/MB) : ಕಳೆದ ಮಾ.20ರಂದು 13ರ ಬಾಲಕಿ ವೈಗಾ ಎಂಬಾಕೆಯ ಮೃತದೇಹ ಕೇರಳದ ಮುಟ್ಟಾರ್ ನದಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಂದೆ ಸಾನು ಮೋಹನ್ನನ್ನೇ ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಕೊಚ್ಚಿ ಪೊಲೀಸರ ವಶಕ್ಕೆ ನೀಡಲಾಗಿದ್ದು ಆತ ವಿಚಾರಣೆಯ ವೇಳೆ ತಾನು ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಆರು ದಿನಗಳ ಕಾಲ ಹೊಟೇಲ್ನಲ್ಲಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೇರಳ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಆತನ ಕಾರು ಮಾತ್ರ ತಮಿಳುನಾಡಿನ ಕೊಯಮತ್ತೂರಿನಿಂದ ಪತ್ತೆಯಾಗಿದೆ. ಏಪ್ರಿಲ್ 10 ರಿಂದ 16 ರವರೆಗೆ ಸಾನು ಮೋಹನ್ ಲಾಡ್ಜ್ನಲ್ಲೇ ಇದ್ದ ಎಂದು ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗೆಯೇ ಆತ ಸಭ್ಯವಾಗಿ ವರ್ತಿಸುತ್ತಿದ್ದ ಆದ್ದರಿಂದ ಯಾವುದೇ ಅನುಮಾನ ಬಂದಿಲ್ಲವೆಂದೂ ತಿಳಿಸಿದ್ದಾರೆ.
ಆತ ಕಾರ್ಡ್ ಮೂಲಕ ರೂಮ್ ಬಾಡಿಗೆ ಪಾವತಿಸುತ್ತಿದ್ದ. ಪ್ರತಿದಿನ ದೇವಾಲಯಕ್ಕೆ ಹೋಗುತ್ತಿದ್ದ, ಏಪ್ರಿಲ್ 16 ರಂದು ಸಾನು ಮೋಹನ್ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ತರಲು ಹೇಳಿದ್ದ ಆದರೆ ಸಾನು ಮೋಹನ್ ಬೆಳಿಗ್ಗೆ ಹೊರಗೆ ಹೋಗಿ ಹಿಂತಿರುಗಿ ಬರಲಿಲ್ಲ. ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ನಕಲಿ ಕೀಲಿ ಬಳಸಿ ರೂಮ್ಗೆ ಹೋದಾಗ ಆತನ ಬ್ಯಾಗ್ಗಳು ಇರಲಿಲ್ಲ. ಆತನ ಬಗ್ಗೆ ವಿಚಾರಣೆ ನಡೆಸಿದ ವೇಳೆ ಆತ ವೈಗಾ ಸಾವಿನ ಆರೋಪಿ ಎಂದು ತಿಳಿದು ಬಂದಿದೆ ಎಂದಿದ್ದಾರೆ.
ಮಾರ್ಚ್ 21 ರಂದು ಸಾನು ಮೋಹನ್ ಹಾಗೂ ಮಗಳು ವೈಗಾ ನಿಗೂಢವಾಗಿ ನಾಪತ್ತೆಯಾಗಿದ್ದು ಬಳಿಕ ವೈಗಾ ಮೃತ ದೇಹ ನದಿಯಲ್ಲಿ ಪತ್ತೆಯಾಗಿತ್ತು. ಆತನ ವಿರುದ್ದ ಮಹಾರಾಷ್ಟ್ರದಲ್ಲಿ ಮೂರು ಕೋಟಿ ವಂಚನೆ ಮಾಡಿರುವ ದಾಖಲಾಗಿತ್ತು. ಬಳಿಕ ಪೊಲೀಸರು ಸಾನು ಮೋಹನ್ಗಾಗಿ ಬಲೆ ಬೀಸಿದ್ದರು.
ಇನ್ನು ವಿಚಾರಣೆಯ ವೇಳೆ ಆರೋಪಿ ಸಾನು, ತಾನು ಹಣಕಾಸಿನ ವಿಚಾರದಲ್ಲಿ ತನ್ನ ಮಗಳು ಹಾಗೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಆಕೆ ಒಪ್ಪದ ಕಾರಣ ಆಕೆಯನ್ನು ನದಿಗೆ ದೂಡಿ ಕೊಂದೆ, ಬಳಿಕ ನನಗೆ ಆತ್ಮಹತ್ಯೆ ಮಾಡಿಕೊಳ್ಳಲು ಭಯವಾಯಿತು. ವೈಗಾ ನನ್ನ ನೆಚ್ಚಿನ ಮಗಳು ಎಂದು ಪೊಲೀಸರಲ್ಲಿ ಹೇಳಿದ್ದಾನೆ.
ಆದರೆ ಆತನ ಹೇಳಿಕೆಗಳು ಬದಲಾಗುತ್ತಲ್ಲೇ ಇದ್ದ ಕಾರಣ ಸಾನು ಅನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮರಣೋತ್ತರ ಪರೀಕ್ಷೆಯ ಪ್ರಕಾರ ಬಾಲಕಿಯ ದೇಹದಲ್ಲಿ ಆಲ್ಕೋಹಾಲ್ ಪ್ರಮಾಣವು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆಕೆಗೆ ಒತ್ತಾಯಪೂರ್ವಕವಾಗಿ ಮದ್ಯ ನೀಡಲಾಗಿದೆ ಎಂದು ಹೇಳಲಾಗಿದೆ.
ಮಾರ್ಚ್ 21 ರಂದು ರಾತ್ರಿ 9: 30 ರ ಸುಮಾರಿಗೆ ಮೋಹನ್ ಮತ್ತು ಕುಟುಂಬ ವಾಸಿಸುತ್ತಿದ್ದ ಕಕ್ಕನಾಡಿನ ಕಾಂಗರಪ್ಪಾಡಿಯಲ್ಲಿರುವ ಶ್ರೀ ಗೋಕುಲಂ ಹಾರ್ಮೋನಿಯಾದ ಭದ್ರತಾ ಸಿಬ್ಬಂದಿಯು, ಆರೋಪಿ ತಂದೆ ಸಾನು ಬಾಲಕಿಯನ್ನು ಹೊದಿಕೆಯಲ್ಲಿ ಸುತ್ತಿ ತನ್ನ ಕಾರಿನಲ್ಲಿ ಕುಳಿರಿಸುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.