ಬೆಂಗಳೂರು, ಎ.19 (DaijiworldNews/PY): ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ವಿಧಾನ ಮಂಡಲದ ಉಭಯ ಸದನಗಳ ಮುಖಂಡರು ಸೇರಿದಂತೆ ಆಡಳಿತ-ವಿರೋಧ ಪಕ್ಷಗಳ ನಾಯಕರೊಂದಿಗೆ ಎಪ್ರಿಲ್ 20ರಂದು ವಿಡಿಯೋ ಸಂವಾದ ನಡೆಸಲು ಸಿಎಂ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಈ ವರ್ಚುವಲ್ ಸಭೆಯು ಸಂಜೆ 4.30ಕ್ಕೆ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ರಾಜ್ಯಾಪಾಲ ವಜುಭಾಯಿ ವಾಲಾ ಅವರು ವಹಿಸಲಿದ್ದಾರೆ.
ಕೊರೊನಾ ತಗುಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿಎಸ್ವೈ ಅವರು ಮಣಿಪಾಲ್ ಆಸ್ಪತ್ರೆಯಿಂದಲೇ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಸೇರಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಸಂಸದ ನಳಿನ್ಕುಮಾರ್ ಕಟೀಲ್, ಹೆಚ್.ಡಿ. ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ಜಿ. ಪರಮೇಶ್ವರ್ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಈ ವರ್ಚವಲ್ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದ್ದು, ವಿಡಿಯೋ ಲಿಂಕ್ ಮುಖೇನ ಎಲ್ಲರೂ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.