ದೆಹಲಿ, ಏ. 19 (DaijiworldNews/HR): ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆಯೆ ಅತ್ತಕಡೆ ರಾಷ್ಟ್ರ ರಾಜಧಾನಿಯಲ್ಲಿ ಪಾನಪ್ರಿಯರು ಮದ್ಯದಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಸಾಂಧರ್ಭಿಕ ಚಿತ್ರ
ಆಮ್ಲಜನಕ ಶೇಖರಣೆ, ಔಷಧಗಳ ಶೇಖರಣೆಗಾಗಿ ಇಂದಿನಿಂದ 26ರ ಸಂಜೆ 5 ರವರೆಗೆ ಒಂದು ವಾರ ಕಾಲ ಲಾಕ್ಡೌನ್ ಮಾಡಲಾಗಿದ್ದು, ಸುದ್ದಿ ಹೊರಬೀಳುತ್ತಿದ್ದಂತೆ ದೆಹಲಿಯ ಗೋಲ್ ಮಾರ್ಕೆಟ್ ಪ್ರದೇಶ ಹಾಗೂ ಖಾನ್ ಮಾರುಕಟ್ಟೆಯ ಮದ್ಯದಂಗಡಿಗಳ ಮುಂದೆ ಜನ ಸಾಮಾಜಿಕ ಅಂತರವನ್ನು ಲೆಕ್ಕಿಸದೆ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿಯ ಬಗ್ಗೆ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ.
ಇನ್ನು ದೆಹಲಿಯಲ್ಲಿ ಒಂದು ವಾರ ಕಾಲ ಲಾಕ್ಡೌನ್ ಘೋಷಿಸಿರುವ ಸರ್ಕಾರ ಇಂದು ರಾತ್ರಿಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದಿದ್ದು, ದೆಹಲಿಯಲ್ಲಿ ಕೊರೊನಾ ವೈರಸ್ನ ನಾಲ್ಕನೇ ಅಲೆ ಕಂಡುಬಂದಿದೆ. 25,000 ಕೊರೊನಾ ಪ್ರಕರಣಗಳು ಇಲ್ಲಿ ವರದಿ ಆಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇಂದು ರಾತ್ರಿ 10ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಇರಲಿದ್ದು, ಎಲ್ಲ ಖಾಸಗಿ ಕಚೇರಿಗಳು ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿಂದ ಕಾರ್ಯವೆಸಗಲಿದ್ದು, ಸರ್ಕಾರಿ ಆಸ್ಪತ್ರೆ ಮತ್ತು ಅಗತ್ಯ ಸೇವೆಗಳು ಲಭ್ಯವಿರಲಿದೆ ಎಂದು ಮೂಲಗಳು ಹೇಳಿವೆ.
ಇನ್ನು ಈ ಆರು ದಿನಗಳಲ್ಲಿ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ, ಈ ಲಾಕ್ಡೌನ್ ಸಂದರ್ಭವನ್ನು ಆಮ್ಲಜನಕ ಶೇಖರಣೆ, ಔಷಧಗಳ ಶೇಖರಣೆಗೆ ಬಳಕೆ ಮಾಡಲಾಗುತ್ತದೆ. ಪ್ರತಿಯೊಬ್ಬರೂ ಲಾಕ್ಡೌನ್ ನಿಯಮ ಪಾಲಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ.