ನವದೆಹಲಿ, ಎ.19 (DaijiworldNews/PY): "ಪೂರ್ವ ಲಡಾಕ್ ಪ್ರದೇಶದ ಕೆಲವು ಜಾಗಗಳಿಂದ ಸೇನೆಯನ್ನು ಹಿಂಪಡೆಯಲು ನಿರಾಕರಿಸಿರುವ ಚೀನಾದ ನಡೆಯಿಂದ ಭಾರತದ ರಾಷ್ಟ್ರೀಯ ಭದ್ರತೆಗೆ ಭಾರೀ ಅಪಾಯವಿದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪೂರ್ವ ಲಡಾಕ್ನ ಹಾಟ್ ಸ್ಪ್ರಿಂಗ್ ಹಾಗೂ ದೀಪ್ಸಂಗ್ ಬಯಲು ಪ್ರದೇಶಗಳಿಂದ ಚೀನಾ ಸರ್ಕಾರ ಸೇನೆಯನ್ನು ಹಿಂಪಡೆಯಲು ನಿರಾಕರಿಸಿದೆ. ಡಿಬಿಒದ ವಾಯು ಸೇನೆಯ ಕಾರ್ಯತಂತ್ರಕ್ಕೂ ಆತಂಕ ಎದುರಾಗಲಿದೆ. ಇದರಿಂದ ಭಾರತದ ರಾಷ್ಟ್ರೀಯ ಭದ್ರತೆಗೆ ಭಾರೀ ಅಪಾಯವಿದೆ. ಕೇಂದ್ರ ಸರ್ಕಾರ ಮಾತುಕತೆಯಲ್ಲಿ ಸಮಯ ವ್ಯರ್ಥ ಮಾಡುತ್ತಿದೆ. ಭಾರತಕ್ಕೆ ಇದಕ್ಕಿಂತಲೂ ಉತ್ತಮವಾಗಿರುವುದು ಬೇಕಾಗಿದೆ" ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ಏನು ನಡೆದಿತ್ತೋ ಅದಕ್ಕೆ ಭಾರತ ತೃಪ್ತಿಪಟ್ಟುಕೊಳ್ಳಬೇಕು ಎಂದು ಚೀನಾ ಹೇಳಿದ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಚೀನಾ, ಭಾರತೀಯ ಗಡಿ ವಿಭಾಗದಲ್ಲಿ ಮಾಡಿದ್ದ ಪುಂಡಾಟಕ್ಕೆ ಭಾರತೀಯ ಸೇನೆಯ 20ಕ್ಕೂ ಹೆಚ್ಚಿನ ಯೋಧರು ಹುತಾತ್ಮರಾಗಿದ್ದರು. ಗಡಿಯಲ್ಲಿ ಭಾರತ ಹಾಗೂ ಚೀನಾ ಸೇನೆಯನ್ನು ನಿಯೋಜನೆ ಮಾಡಿದ್ದು, ಯುದ್ಧೋನ್ಮಾದದ ವಾತಾವರಣ ನಿರ್ಮಾಣವಾಗಿತ್ತು. ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ನಡೆದ ಮಾತುಕತೆಯಿಂದ ಸೇನೆಯ ಹಿಂತೆಗೆತ ಆರಂಭವಾಗಿತ್ತು. ವಿವಾದಿತ ಪ್ರದೇಶದಿಂದ ಭಾರತ ತನ್ನ ಸೇನೆ ಹಾಗೂ ಯುದ್ದ ಸಲಕರಣೆಗಳನ್ನು ಹಿಂತೆಗೆದುಕೊಂಡಿತ್ತು. ಆದರೆ, ಚೀನಾ ಮಾತ್ರ ಭಾಗಶಃ ಸೇನೆಯನ್ನು ಮಾತ್ರವೇ ಹಿಂಪಡೆದಿದೆ.