ಬೆಂಗಳೂರು, ಏ 19 (DaijiworldNews/MS): ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ನಿಷೇಧ ವಾಪಸ್ಸು ಪಡೆಯುವಂತೆ ಸರಕಾರಕ್ಕೆ ಮನವಿ ಮಾಡಿದ್ದ ಮುಜರಾಯಿ ಸಚಿವ ಶ್ರೀನಿವಾಸ್ ಪೂಜಾರಿ ಹಾಗೂ ಶಾಸಕ ರಘುಪತಿ ಭಟ್ ಅವರ ನಡೆಗೆ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿ" ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಸ್ಮಶಾನಗಳಲ್ಲಿ ಶವಗಳ ಜಾತ್ರೆ ನಡೆಯುತ್ತಿದೆ. ಇದರ ನಡುವೆ ಮುಜರಾಯಿ ಸಚಿವ ಶ್ರೀನಿವಾಸ್ ಪೂಜಾರಿ ಹಾಗೂ ಶಾಸಕ ರಘುಪತಿ ಭಟ್ ಅವರಿಗೆ ಧಾರ್ಮಿಕ ಕಾರ್ಯಕ್ರಮಗಳ ನಿಯಮ ಸಡಿಲಿಕೆಯಾಗಬೇಕಂತೆ. ಪರಿಸ್ಥಿತಿಯ ಅರಿವು, ಜನ ಹಿತದ ಚಿಂತೆ ಇಲ್ಲದ ಬಿಜೆಪಿ ಪಕ್ಷ ಗಾಂಪರ ಗುಂಪಾಗಿದೆ" ಎಂದು ವ್ಯಂಗ್ಯವಾಡಿದೆ.
ಕೋಲ, ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಹೂರ್ತ ನಿಗದಿಯಾಗಿದೆ.ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಆ ಆದೇಶವನ್ನು ಹಿಂಪಡೆಯಬೇಕು ಎಂದು ಎಂದು ಶಾಸಕ ಕೆ.ರಘುಪತಿ ಭಟ್ ಶನಿವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದರು.
ಮತ್ತೊಂದೆಡೆ ಧಾರ್ಮಿಕ ಕಾರ್ಯಕ್ರಮಗಳಿಗೆ ಕೋವಿಡ್ ಮಾರ್ಗಸೂಚಿಯಿಂದ ವಿನಾಯತಿ ನೀಡುವಂತೆ ಹಿಂದೂ ಧಾರ್ಮಿಕ ದತ್ತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದರು.