ನವದೆಹಲಿ, ಎ.19 (DaijiworldNews/PY): ವೀಕೆಂಡ್ ಲಾಕ್ಡೌನ್ ಪಾಲಿಸದೇ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದೂ ಅಲ್ಲದೇ, ಪೊಲೀಸರಿಗೆ ಅವಾಜ್ ಹಾಕಿರುವ ಘಟನೆ ದೆಹಲಿಯ ದರಿಯಾಗಂಜ್ನಲ್ಲಿ ನಡೆದಿದೆ.
ಕಾರಿನ ಒಳಗೆ ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಪೊಲೀಸರು ದಂಪತಿಯನ್ನು ತಡೆದಿದ್ದರು. ಅಲ್ಲದೇ, ಅವರ ಬಳಿ ಕರ್ಫ್ಯೂ ಪಾಸ್ ಕೂಡಾ ಇರಲಿಲ್ಲ. ಆದರೆ, ತಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಸೌಮ್ಯವಾಗಿ ವರ್ತಿಸುವ ಬದಲು ಅಸಭ್ಯವಾಗಿ ವರ್ತಿಸಿದ್ದಾರೆ.
ನಾನು ಇಲ್ಲಿಯೇ ನನ್ನ ಪತಿಗೆ ಕಿಸ್ ಮಾಡುತ್ತೇನೆ. ನೀವು ನನ್ನನ್ನು ಹೇಗೆ ತಡೆಯುತ್ತೀರಿ? ಕಾರ್ ಅನ್ನು ಏಕೆ ತಡೆದಿದ್ದೀರಿ? ಎಂದು ಪೊಲೀಸರಿಗೆ ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾರಿನಲ್ಲಿದ್ದಾಗಲೂ ಮಾಸ್ಕ್ ಧರಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ ಎಂದು ಪೊಲೀಸರು ಮಹಿಳೆಗೆ ತಿಳಿಸಿದರೂ ಕೂಡಾ ದಂಪತಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಮಹಿಳಾ ಪೊಲೀಸ್ ಅನ್ನು ಕರೆಸಿ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ದಂಪತಿಯ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.