ದೆಹಲಿ, ಏ. 19 (DaijiworldNews/HR): ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು, ಇನ್ನೊಮ್ಮೆ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡುವ ಯೋಜನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, "ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್ಡೌನ್ ಮಾಡುವುದಿಲ್ಲ, ಅದರ ಬದಲಿಗೆ ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶವನ್ನು ಗುರುತಿಸಿ ಕಂಟೈನ್ಮೆಂಟ್ ವಲಯಗಳನ್ನಾಗಿ ಗುರುತಿಸಲಾಗುವುದು. ಅಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ, ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ" ಎನ್ನಲಾಗಿದೆ.
ಇನ್ನು ನಿರ್ಮಲಾ ಸೀತಾರಾಮನ್ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಧ್ಯಕ್ಷ ಅನಿಮೇಶ್ ಸಕ್ಸೇನಾರೊಂದಿಗೆ ಮಾತುಕತೆ ನಡೆಸಿದ್ದು, ರಾಷ್ಟ್ರಾದ್ಯಂತ ಮತ್ತೆ ಲಾಕ್ಡೌನ್ ಜಾರಿ ಮಾಡುವ ಯೋಜನೆ ಇಲ್ಲ ಎಂದು ಉದ್ಯಮ ಕ್ಷೇತ್ರಕ್ಕೆ ಭರವಸೆ ನೀಡಿದ್ದಾರೆ.
ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಣ್ಣ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆತಂಕ ಶುರುವಾಗಿದ್ದು, ಮತ್ತೆ ಲಾಕ್ಡೌನ್ ಆದರೆ ಪರಿಸ್ಥಿತಿ ಏನೆಂಬ ಭಯ ಹುಟ್ಟಿದೆ. ಅವರಲ್ಲಿನ ಆತಂಕ ದೂರ ಮಾಡುವ ಸಲುವಾಗಿ ರವಿವಾರ ನಿರ್ಮಲಾ ಸೀತಾರಾಮನ್ ಈ ಕರೆ ಮಾಡಿದ್ದಾರೆ.