ಪುಣೆ, ಏ. 19 (DaijiworldNews/HR): ತನ್ನ ಮಗಳು ಯಾವುದೋ ಯುವಕನೊಂದಿಗೆ ವಾಟ್ಸಾಪ್ನಲ್ಲಿ ಚಾಟ್ ಮಾಡುವುದು ಗೊತ್ತಾದ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಟ್ರಕ್ ಚಲಾಯಿಸಿ ಹತ್ಯೆಗೈದು ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದೂರಿ ಗ್ರಾಮದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಮಕ್ಕಳ ಜೀವ ತೆಗೆದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಭರತ್ ಬರಾಟೆ(40) ಎಂದು ಗುರುತಿಸಲಾಗಿದೆ.
ಭರತ್ನ 18 ವರ್ಷದ ಮಗಳು ನಂದಿನಿ ವಾಟ್ಸಾಪ್ನಲ್ಲಿ ಯುವಕನೊಂದಿಗೆ ಚಾಟ್ ಮಾಡುತ್ತಿದ್ದಾಗ ಅಪ್ಪನ ಕೈಗೆ ಸಿಕ್ಕಿಬಿದ್ದಿದ್ದು, ಮಗಳಿಗೆ ಬೈದು ಬುದ್ಧಿ ಹೇಳಿದ್ದರೂ ಆಕೆ ತಾನೇನೂ ತಪ್ಪು ಮಾಡುತ್ತಿಲ್ಲ ಎಂದು ವಾದಿಸಿದ್ದಳು. ಆಕೆಗೆ ಆಕೆಯ 14 ವರ್ಷದ ತಂಗಿ ವೈಷ್ಣವಿ ಕೂಡ ಬೆಂಬಲ ನೀಡಿದ್ದಳು. ಇದನ್ನು ಸಹಿಸದ ಭರತ್ ಕೋಪದಿಂದ ಅವರಿಬ್ಬರ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿದ್ದಾನೆ.
ಇನ್ನು ಟ್ರಕ್ ಚಾಲಕನಾಗಿದ್ದ ಭರತ್ ಮನೆಗೆ ಬಂದಾಗ ಮಗಳು ಮೊಬೈಲ್ನಲ್ಲಿ ಚಾಟ್ ಮಾಡುತ್ತಿರುವುದನ್ನು ನೋಡಿ ಕೋಪಗೊಂಡಿದ್ದು, ಇಬ್ಬರೂ ಹೆಣ್ಣುಮಕ್ಕಳಿಗೆ ಮನ ಬಂದಂತೆ ಥಳಿಸಿ ಬಳಿಕ ಅವರಿಬ್ಬರನ್ನೂ ಹೊರಗೆ ಎಳೆದೊಯ್ದು ಟ್ರಕ್ ಹರಿಸಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಟ್ರಕ್ ಶಬ್ದ ಕೇಳಿದ ಆತನ ಹೆಂಡತಿ ಮನೆಯಿಂದ ಹೊರಗೆ ಬಂದು ನೋಡಿದಾಗ ತನ್ನಿಬ್ಬರು ಹೆಣ್ಣುಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದು ಆಗ ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಭರತ್ ತನ್ನ ಹೆಂಡತಿಗೆ ಹೆದರಿಸಿದ್ದು, ಈ ವಿಷಯ ಗೊತ್ತಾಗಿ ಪೊಲೀಸರು ತನ್ನನ್ನು ಬಂಧಿಸುತ್ತಾರೆಂಬ ಭಯದಿಂದ ಕೊನೆಗೆ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.