ನವದೆಹಲಿ, ಏ.19 (DaijiworldNews/MB) : ಸೆಪ್ಟೆಂಬರ್ ವೇಳೆಗೆ ಕೋವಾಕ್ಸಿನ್ ಲಸಿಕೆ ಉತ್ಪಾದನೆಯನ್ನು ಹತ್ತು ಪಟ್ಟು ಅಧಿಕಗೊಳಿಸಲಾಗುವುದು. ಕೊರೊನಾ ವಿರುದ್ಧದ ಔಷಧ ರೆಮ್ಡೆಸಿವಿರ್ ತಯಾರಿಕೆಯನ್ನು ಕೂಡಾ ಮೇ ವೇಳೆಗೆ ಪ್ರತಿ ತಿಂಗಳಿಗೆ 74.1 ಲಕ್ಷಕ್ಕೆ ದ್ವಿಗುಣ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ತಿಳಿಸಿದ್ದಾರೆ.
ಸರಣಿ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿರುವ ಅವರು, ''ಕೊರೊನಾ ಹರಡುವಿಕೆಯನ್ನು ತಡೆಯಲು ಅತೀ ದೊಡ್ಡದಾದ ವಾಕ್ಸಿನ್ ಅಭಿಯಾನ ಪರಿಣಾಮ ಬೀರುವುದಿಲ್ಲ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ. ಕೊರೊನಾ ವ್ಯಾಕ್ಸಿನೇಷನ್ ಕೇಂದ್ರಗಳ ನಿರಂತರ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ'' ಎಂದು ಹೇಳಿದ್ದಾರೆ.
ಆಮ್ಲಜನರ ಪೂರೈಕೆ ವಿಚಾರದಲ್ಲಿ ಟ್ವೀಟ್ ಮಾಡಿರುವ ಅವರು, ''ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲಾಗುವುದು. ಹಾಗೆಯೇ ಪೂರೈಕೆಯ ವೇಗವನ್ನು ವೃದಿಸಲಾಗುವುದು. ಕೆಲವು ಆಯ್ದ ಕೈಗಾರಿಕೆಗಳನ್ನು ಹೊರತುಪಡಿಸಿ ಕೈಗಾರಿಕಾ ಉದ್ದೇಶಗಳಿಗಾಗಿ ಆಕ್ಸಿಕನ್ ಸರಬರಾಜು ನಿಷೇಧ ಮಾಡಲಾಗುವುದು. ದೇಶಾದ್ಯಂತ ದ್ರವ ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕ ಸಿಲಿಂಡರ್ಗಳನ್ನು ಸಾಗಿಸಲು ಮುಂದಿನ ಕೆಲವು ದಿನಗಳಲ್ಲಿ 'ಆಕ್ಸಿಜನ್ ಎಕ್ಸ್ಪ್ರೆಸ್' ರೈಲುಗಳನ್ನು ಓಡಿಸಲಾಗುತ್ತದೆ. ಈ ರೈಲುಗಳು ಆಕ್ಸಿಜನ್ ಪೂರೈಕೆಯ ವೇಗ ಹೆಚ್ಚಿಸಲಿದೆ'' ಎಂದು ಹೇಳಿದ್ದಾರೆ.
ರಿಮೆಡೆಸಿವಿರ್ ಪೂರೈಕೆಯ ಬಗ್ಗೆ ತಿಳಿಸಿದ ಅವರು, "ಮೇ ವೇಳೆಗೆ ಉತ್ಪಾದನೆಯನ್ನು ತಿಂಗಳಿಗೆ 74.1 ಲೀಗೆ ದ್ವಿಗುಣಗೊಳಿಸಲಾಗುತ್ತಿದೆ. ಉತ್ಪಾದನೆಯನ್ನು ಹೆಚ್ಚಿಸಲು 20 ಉತ್ಪಾದನಾ ಘಟಕಗಳಿಗೆ ಎಕ್ಸ್ಪ್ರೆಸ್ ಅನುಮತಿ ನೀಡಲಾಗಿದೆ'' ಎಂದು ತಿಳಿಸಿದ್ದಾರೆ.
''ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಮತ್ತು ಕೇಂದ್ರ ಸಚಿವಾಲಯಗಳ ಅಡಿಯಲ್ಲಿರುವ ಆಸ್ಪತ್ರೆಗಳಲ್ಲಿ ವಾರ್ಡ್ಗಳನ್ನು ಮೀಸಲಿಡುವ ಮೂಲಕ ಕೊರೊನಾ ರೋಗಿಗಳ ಹಾಸಿಗೆಗಳ ಸಂಖ್ಯೆಯನ್ನು ಅಧಿಕಗೊಳಿಸಲಾಗುವುದು. ಭಾರತ ಸರ್ಕಾರ ಮಹಾರಾಷ್ಟ್ರಕ್ಕೆ 1,121, ಉತ್ತರ ಪ್ರದೇಶಕ್ಕೆ 1,700, ಜಾರ್ಖಂಡ್ಗೆ 1,500, ಗುಜರಾತ್ಗೆ 1,600, ಮಧ್ಯಪ್ರದೇಶಕ್ಕೆ 152 ಮತ್ತು ಛತ್ತೀಸ್ಗಢಕ್ಕೆ 230 ವೆಂಟಿಲೇಟರ್ಗಳನ್ನು ಒದಗಿಸಿದೆ'' ಎಂದು ಮಾಹಿತಿ ನೀಡಿದರು.