ಬೆಂಗಳೂರು ಏ 19 (DaijiworldNews/MS): ನಟ ಹಾಗೂ 'ಮಠ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕೊರೊನಾ ಹಿನ್ನಲೆಯಲ್ಲಿ ಫೇಸ್ ಬುಕ್ ಲೈವ್ ಮೂಲಕ ರಾಜಕಾರಣಿಗಳ ಬಗ್ಗೆ ಹಾಗೂ ವ್ಯವಸ್ಥೆಯ ವಿರುದ್ಧ ವಾಗ್ಧಾಳಿ ನಡೆಸಿದ್ದು, ತಾವು ಮಾತನಾಡಿದ ದೃಶ್ಯಗಳನ್ನೇ ಡೆತ್ ನೋಟ್ ಎಂದು ಪರಿಗಣಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಗುರುಪ್ರಸಾದ್ ಅವರಿಗೂ ಕೊರೊನಾ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು, " ಕೊರೊನಾಕ್ಕಾಗಿ ರಾಜ್ಯ ಸರ್ಕಾರ ಮಾಡಿಕೊಂಡಿರುವ ಸಿದ್ದತೆ ಏನು ಸಾಲದು, ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಮತ್ತು ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.
ಒಬ್ಬ ಸತ್ತರೂ ನಾನು ಅದಕ್ಕೆ ಹೊಣೆಗಾರ ಅನ್ನುವವರು ಮುಖ್ಯಮಂತ್ರಿ, ಆದರೆ ಇಲ್ಲಿ ಜನಗಳು ಸಾಯುತ್ತಿದ್ದಾರಲ್ಲ ನೋಡ್ರಿ, ಪ್ರಾಮಾಣಿಕತೆ ಇದ್ದಲ್ಲಿ ಆಡಳಿತ ಇರುತ್ತದೆ. ಪ್ರಾಮಾಣಿಕತೆ ಇಲ್ಲದ ಕಡೆ ರಾಜಕೀಯ ಇರುತ್ತದೆ. ರಾಜಕಾರಣಿಗಳು ಯಾರೂ ಕೂಡ ಸಾಚಾ ಅಲ್ಲ. ರಾಜಕೀಯ ಮಾಡುವುದನ್ನು ಬಿಟ್ಟು ಜನರ ಸೇವೆ ಮಾಡಿ ಎಂದು ಹೇಳಿದ್ದಾರೆ.ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕೊರೋನಾದಿಂದ ಮೃತಪಟ್ಟ ಪ್ರತಿಯೊಬ್ಬರ ಸಾವಿಗೆ ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ವಿಜಯೇಂದ್ರ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕಸ್ಮಾತ್ ಕೊರೊನಾದಿಂದ ನಾನು ಮೃತಪಟ್ಟರೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ನನ್ನ ಡೆತ್ ನೋಟ್. ಜನರ ಪ್ರಾಣ ಉಳಿಸಿ ಸ್ವಾಮಿ ಎಂದು ಹೇಳಿದ್ದಾರೆ.