ನವದೆಹಲಿ, ಎ.19 (DaijiworldNews/PY): ಕೊರೊನಾ ಸೋಂಕಿನಿಂದ ಬಳಲುವವರ ಚಿಕಿತ್ಸೆಗೆ ಒದಗಿಸುವ ನಿಟ್ಟಿನಲ್ಲಿ 9 ನಿರ್ದಿಷ್ಟ ಕೈಗಾರಿಕೆಗಳನ್ನು ಹೊರತುಪಡಿಸಿ ಉಳಿದ ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, "ಎಪ್ರಿಲ್ 22ರಿಂದ ಈ ಆದೇಶವು ಜಾರಿಗೆ ಬರಲಿದೆ" ಎಂದು ತಿಳಿಸಿದ್ದಾರೆ.
ಇನ್ನು ದೇಶಾದ್ಯಂತ ವೈದ್ಯಕೀಯ ಆಮ್ಲಜನಕ ಕೊರತೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಆಮ್ಲಜನಕ ಎಕ್ಸ್ಪ್ರೆಸ್ ಓಡಿಸಲು ಮುಂದಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು, "ಆಮ್ಲಜನಕ ಎಕ್ಸ್ಪ್ರೆಸ್ನಿಂದ ಆಸ್ಪತ್ರೆಗಳಿಗೆ ಕ್ಷಿಪ್ರವಾಗಿ ಅಮ್ಲಜನಕ ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.
"ಕೆಲವು ಆಯ್ದ ಕೈಗಾರಿಕೆಗಳನ್ನು ಹೊರತುಪಡಿಸಿ ಕೈಗಾರಿಕಾ ಉದ್ದೇಶಗಳಿಗಾಗಿ ಆಮ್ಲಜನಕದ ಪೂರೈಕೆಯನ್ನು ನಿಷೇಧಿಸಲಾಗಿದೆ. ದ್ರವರೂಪದ ವೈದ್ಯಕೀಯ ಆಮ್ಲಜಕ ಹಾಗೂ ಆಮ್ಲಜನಕ ಸಿಲಿಂಡರ್ಗಳನ್ನು ಸಾಗಿಸಲು ಆಮ್ಲಜನಕ ಎಕ್ಸ್ಪ್ರೆಸ್ ಓಡಿಸಲು ತೀರ್ಮಾನಿಸಲಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಈ ವಿಶೇಷ ರೈಲುಗಳು ಸೋಮವಾರದಿಂದ ಮುಂಬೈಯ ಕಲಂಬೋಲಿ ಹಾಗೂ ಬೊಯಿಸಾರ್ ನಿಲ್ದಾಣಗಳಿಂದ ವಿಶಾಖಪಟ್ಟಣ, ಜಮ್ಮೆಡ್ಪುರ, ರೂರ್ಕೆಲಾ ಹಾಗೂ ಬೊಕಾರೋಗಳಿಗೆ ತೆರಳಲಿವೆ. ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರಗಳು ರೈಲುಗಳ ಮೂಲಕ ವೈದ್ಯಕೀಯ ಆಮ್ಲಜನಕ ಪೂರೈಸಲು ಮನವಿ ಮಾಡಿದ್ದು, ರವಿವಾರ ಸಭೆ ನಡೆಸಿ ವಿಶೇಷ ರೈಲು ಓಡಿಸಲು ತೀರ್ಮಾನ ಮಾಡಲಾಯಿತು.