ಬೆಂಗಳೂರು, ಏ 19 (DaijiworldNews/MS): ಕನ್ನಡದ ನಿಘಂಟು ತಜ್ಞ, ವಿದ್ವಾಂಸ, ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ 108 ವರ್ಷದ ಅವರು, ಏ.19 ರ ತಡರಾತ್ರಿ 1.15 ರ ಸಮಯಕ್ಕೆ ವಿಧಿವಶರಾಗಿದ್ದಾರೆ.
1913ರಲ್ಲಿ ಮೈಸೂರಿನಲ್ಲಿ ಜನಿಸಿದ ವೆಂಕಟಸುಬ್ಬಯ್ಯನವರು, ಮೈಸೂರಿನಲ್ಲಿಯೆ ಬೆಳೆದವರು. ಇವರ ತಂದೆ ಗಂಜಾಂ ತಿಮ್ಮಣ್ಣಯ್ಯನವರು ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. 1937ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಸುವರ್ಣಪದಕವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು. 1939 ರಿಂದ ಪ್ರಾರಂಭಿಸಿ ಸುಮಾರು 40 ವರ್ಷಗಳ ಕಾಲ ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು. ಇವರ ಭಾಷಾ ಸಾಹಿತ್ಯ ಸಾಧನೆಗೆ 2005ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನಿತ್ತು ಗೌರವಿಸಿದೆ. 2017 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಜಯನಗರದ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನದ ಬಳಿಕ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯ ಅಂತ್ಯಸಂಸ್ಕಾರ ನೆರವೇರಲಿದೆ