ನವದೆಹಲಿ, ಎ.18 (DaijiworldNews/PY): "ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಗಂಭೀರವಾಗಿದ್ದು, ಕೊರೊನಾ ಪೀಡಿತರ ಚಿಕಿತ್ಷೆಯ ಸೌಲಭ್ಯಕ್ಕಾಗಿ ಅಗತ್ಯವಾದ ನೆರವು ಒದಗಿಸಬೇಕು" ಎಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
"ದೆಹಲಿಯಲ್ಲಿ ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 7000 ಹಾಸಿಗೆಗಳನ್ನು ಮೀಸಲಿಡಬೇಕು. ಅಲ್ಲದೇ, ಆಮ್ಲಜನಕ ಸೌಲಭ್ಯವನ್ನು ನೀಡಬೇಕು" ಎಂದು ಪತ್ರದಲ್ಲಿ ಬರೆದಿದ್ದಾರೆ.
"ಸದ್ಯ ದೆಹಲಿಯಲ್ಲಿ ಹಾಸಿಗೆ ಹಾಗೂ ಆಮ್ಲಜನಕದ ಕೊರತೆ ಇದ್ದು, ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇದಕ್ಕೆ ನಿಮ್ಮ ನೆರವೂ ಕೂಡಾ ಅವಶ್ಯಕ. ಡಿಆರ್ಡಿಒ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 1000ಕ್ಕೆ ಏರಿಸಬೇಕು. ಪರಿಸ್ಥಿತಿ ನಿಭಾಯಿಸಲಿ ಇಲ್ಲಿಯವರಗೆ ಕೇಂದ್ರ ಸರ್ಕಾರ ಅಗತ್ಯವಾದ ಸಹಕಾರ ನೀಡಿದೆ" ಎಂದಿದ್ದಾರೆ.
ಇದಕ್ಕೂ ಮೊದಲು ಸಿಎಂ ಅರವಿಂದ ಕೇಜ್ರಿವಾಲ್ ಅವರು, "ದೆಹಲಿಯಲ್ಲಿ 25,500ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳ ವರದಿಯಾಗುತ್ತಿವೆ. ಐಸಿಯು ಹಾಸಿಗೆಗಳ ಸಂಖ್ಯೆ ಕಡಿಮೆ ಇದೆ" ಎಂದು ಹೇಳಿದ್ದರು