ನವದೆಹಲಿ, ಏ. 18 (DaijiworldNews/HR): ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಿವಾರ ಪತ್ರ ಬರೆದಿದ್ದು, ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಕೊರೊನಾ ವಿರುದ್ದದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿರುವ ವ್ಯಾಕ್ಸಿನೇಷನ್ ಹೆಚ್ಚಿಸಬೇಕು, ಎಷ್ಟು ಸಂಖ್ಯೆಯ ಲಸಿಕೆ ಹಾಕಲಾಗಿದೆ ಎಂಬುದನ್ನು ನೋಡಬಾರದು. ಲಸಿಕೆ ಪಡೆದ ಶೇಕಡಾವಾರು ಜನಸಂಖ್ಯೆ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ನಾವು ಹೆಚ್ಚು ಉತ್ತಮವಾಗಿ ಮತ್ತು ತ್ವರಿತವಾಗಿ ಲಸಿಕೆ ನೀಡಬೇಕಾಗಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ನಾವು ಅನೇಕ ಕೆಲಸಗಳನ್ನು ಮಾಡಬೇಕು ಆದರೆ, ಈ ಪ್ರಯತ್ನದ ಒಂದು ದೊಡ್ಡ ಭಾಗವಾಗಿ ವ್ಯಾಕ್ಸಿನೇಷನ್ ಹೆಚ್ಚಳ ಮಾಡಬೇಕು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ಕೈಗೊಳ್ಳಬೇಕಾದ ಪ್ರಯತ್ನಗಳ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿದ ಬೆನ್ನಲ್ಲೇ ಮನ್ ಮೋಹನ್ ಸಿಂಗ್ ಮೋದಿಯವರಿಗೆ ಈ ಸಲಹೆ ನೀಡಿದ್ದಾರೆ.
ಇನ್ನು ಆರು ತಿಂಗಳುಗಳಿಗೆ ಆರ್ಡರ್ ಮತ್ತು ಪೂರೈಸಬೇಕಾದ ಲಸಿಕೆ ಡೋಸ್ ಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಬೇಕು ಎಂದು ಮನ್ ಮೋಹನ್ ಸಿಂಗ್ ಒತ್ತಾಯಿಸಿದ್ದಾರೆ.