ಬಾಗಲಕೋಟೆ, ಏ.18 (DaijiworldNews/MB) : ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸರಿಯಾಗಿ ಕಿವಿ ಕೇಳುತ್ತಿಲ್ಲ, ಅಕ್ಕಪಕ್ಕ ಇರುವವರು ಕೂಡಾ ಅವರಿಗೆ ಸರಿಯಾದ ಮಾಹಿತಿ ನೀಡದೆ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪನವರು ಸಿಎಂ ಸ್ಥಾನ ಬಿಟ್ಟರೆ ನಾವು ಕೂಡಾ ಸಿಎಂ ಆಗಬಹುದು'' ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಸಿಎಂ ಬಿ ಎಸ್ ಯಡಿಯೂರಪ್ಪ ಎರಡು ಕಿವಿಗೂ ಮಶೀನ್ ಹಾಕಿಕೊಂಡರೂ ಆ ಪುಣ್ಯಾತ್ಮನಿಗೆ ಕಿವಿ ಕೇಳಿಸಲ್ಲ. ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ದವಿಲ್ಲ. ಬಿಟ್ಟರೆ ನಾವಾದ್ರೂ ಸಿಎಂ ಆಗ್ತಿದ್ವಿ'' ಎಂದು ಹೇಳಿದರು.
''ನಾವು ಸಿಎಂ ಲಿಸ್ಟ್ನಲ್ಲಿ ಇಲ್ಲವೆಂದು ನೀವು ಅಂದುಕೊಳ್ಳಬೇಡಿ. ನಾನು ಸಿಎಂ ಲೀಸ್ಟ್ನಲ್ಲಿ ಇದ್ದೇನೆ ಎಂದು ಹೇಳಿದ ಅವರು, ಮುಂಬರುವ ದಿನದಲ್ಲಿ ಸಿಎಂ ಬದಲಾವಣೆಯಾಗುವುದು ಖಂಡಿತ'' ಎಂದು ಹೇಳಿದ್ದಾರೆ.
''ನಮ್ಮ ಸರ್ಕಾರದಲ್ಲಿ ಕೆಲವು ಡುಬ್ಲಿಕೇಟ್ ಸಚಿವರಿದ್ದಾರೆ. ನಾನು ಪಂಚಮಸಾಲಿಗೆ 2ಎ ಮೀಸಲಾತಿ ಕೊಡಬೇಕೆಂದು ಅಸೆಂಬ್ಲಿಯಲ್ಲಿ ಹೇಳಲು ಬಿಎಸ್ವೈ ಬಿಡಲಿಲ್ಲ. ನೀವೇ ಉತ್ತರ ಕೊಡಬೇಕೆಂದು ನಾನು ಪಟ್ಟು ಹಿಡಿದೆ. ಬಿಎಸ್ವೈ ಮಾತ್ರ ಕೊಡಲ್ಲ ಎಂದು ಹೇಳಿದರು. ಅವರಿಗೆ ಆ ಕಡೆ ಈ ಕಡೆ ಕೂತು ಕಿವಿ ಚುಚ್ಚುವರು ಇದ್ದಾರೆ'' ಎಂದು ಹೇಳಿದರು.
''ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಸದನದಲ್ಲಿ ಭರವಸೆ ನೀಡಿದ್ದಾರೆ. ಅವರ ಮೇಲೆ ಭರವಸೆ ಇದೆ. ಒಂದು ವೇಳೆ ಅವರು ಮಾತು ತಪ್ಪಿದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು'' ಎಂದು ಎಚ್ಚರಿಕೆ ನೀಡಿದರು.
''ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು. ಈ ಹೋರಾಟ ನಾನು ಸಿಎಂ ಆಗಲು, ಕಾಶಪ್ಪನವರ್ ಮಂತ್ರಿ ಆಗಲು ನಡೆಸುತ್ತಿರುವುದಲ್ಲ. ಎಲ್ಲಾ ಸಮಾಜದವರಿಗೆ ಮೀಸಲಾತಿಗಾಗಿ ಹೋರಾಟ'' ಎಂದು ಹೇಳಿದರು.
ಇನ್ನು ತಮಗೆ ನೊಟೀಸ್ ದೊರಕಿರುವ ವಿಚಾರದಲ್ಲಿ ಮಾತನಾಡಿದ ಯತ್ನಾಳ್, ''ಅದೆಲ್ಲ ಎರಡು ತಿಂಗಳ ಹಿಂದೆ ನಡೆದದ್ದು, ಲವ್ ಲೆಟರೂ ಆಯ್ತು. ನೊಟೀಸು ಆಯ್ತು. ಈ ಬಗ್ಗೆ ಹೆಚ್ಚು ಮಾತನಾಡಲ್ಲ'' ಎಂದ ಹೇಳಿದರು.