ಮುಂಬೈ, ಏ. 18 (DaijiworldNews/HR): ಕೊರೊನಾ ಚಿಕಿತ್ಸೆ, ಔಷಧ ಪೂರೈಕೆ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ಬಿಜೆಪಿ ನಡುವಣ ಆರೋಪ ಹಾಗೂ ಪ್ರತ್ಯಾರೋಪಗಳು ಮುಂದುವರಿದಿದೆ.
ದಮನ್ನ ರೆಮ್ಡಿಸಿವಿರ್ ಪೂರೈಕೆ ಕಂಪನಿ 'ಬ್ರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್’ ನಿರ್ದೇಶಕರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಂಪನಿಯ ನಿರ್ದೇಶಕರನ್ನು ಹೆಚ್ಚುವರಿ ರೆಮ್ಡಿಸಿವಿರ್ ಹೊಂದಿದ್ದ ಆರೋಪದಲ್ಲಿ ಮುಂಬೈನ ವಿಲೆ ಪಾರ್ಲೆ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ದರೇಕರ್ ಮತ್ತು ಬಿಜೆಪಿ ಎಂಎಲ್ಸಿ ಪ್ರಸಾದ್ ಲಾಡ್ ಠಾಣೆಗೆ ಧಾವಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ರೆಮ್ಡಿಸಿವಿರ್ ದಾಸ್ತಾನು ಇದೆ ಮತ್ತು ವಿಮಾನದ ಮೂಲಕ ರಫ್ತು ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಯ ಮೇರೆಗೆ ಕಂಪನಿಯ ನಿರ್ದೇಶಕರನ್ನು ರಾತ್ರಿ ಕರೆಸಿಕೊಂಡಿದ್ದ ಪೊಲೀಸರು ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದರು.
ಕೊರೊನಾದ ವಿರುದ್ಧ ನಾವು ಹೋರಾಡುತ್ತಿರುವಾಗ ಮಹಾರಾಷ್ಟ್ರ ಸರ್ಕಾರವು ಈ ರೀತಿ ನಡೆದುಕೊಂಡಿರುವುದು ನಾಚಿಕೆಗೇಡಿನ ವಿಚಾರವಾಗಿದ್ದು, ಇಂಥ ಕಷ್ಟದ ಸಮಯದಲ್ಲಿ ರಾಜ್ಯಕ್ಕೆ ರೆಮ್ಡಿಸಿವಿರ್ ಪೂರೈಸಲು ಮುಂದಾಗಿದ್ದ ಕಂಪನಿಯ ಅಧಿಕಾರಿಗಳನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದು ಎಷ್ಟು ಸರಿ" ಎಂದು ಫಡಣವೀಸ್ ಪ್ರಶ್ನಿಸಿದ್ದಾರೆ.