ಬೆಂಗಳೂರು, ಎ.18 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರ ಆರೋಗ್ಯಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ" ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ, ಘೋಷಿಸಿದೆ. ಈವರೆಗೆ ಯಾರಿಗೆ ಆ ಹಣ ದೊರೆತಿದೆ. ಪೆಟ್ರೋಲ್, ಡಿಸೇಲ್ ದರವೂ ಏರಿಕೆಯಾಗಿದೆ. ಸಿಮೆಂಟ್, ಗೊಬ್ಬರ ದರವೂ ಏರಿಕೆಯಾಗಿದ್ದು, ರೈತರು ಪರದಾಡುವಂತಾಗಿದೆ. ಹೆಣ್ಣು ಮಕ್ಕಳು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಸರ್ಕಾರ ಯಾವ ಧನಸಹಾಯ ನೀಡುತ್ತಿದೆ?" ಎಂದು ಕೇಳಿದ್ದಾರೆ.
"ಮನೆಗೆ ಬಿಂಕಿ ಬಿದ್ದಾಗ ಬಾವಿ ತೋಡಲು ಹೊರಟ ಸ್ಥಿತಿ ಸರ್ಕಾರದ್ದು. ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಅಧಿಕಾರಿಗಳನ್ನು ಬಳಸಿಕೊಳ್ಳಿ. ಅಭಿವೃದ್ದಿ ಕೆಲಸವನ್ನು ನಿಲ್ಲಿಸಿ ಆರೋಗ್ಯದ ಕಡೆ ಗಮನಹರಿಸಿ" ಎಂದಿದ್ದಾರೆ.
"ಹೆಣ ಸುಡುವವರಿಗೂ ವೇತನ ನೀಡುತ್ತಿಲ್ಲ. ಇದರೊಂದಿಗೆ ಹೆಣ ಹೂಳಲು ಕೂಡಾ ಜಾಗ ಇಲ್ಲದಂತಾಗಿದೆ. ಕಂದಾಯ ಭೂಮಿಯನ್ನು ಗುರುತಿಸಿ ಹೆಣ ಹೂಳಲು ಅವಕಾಶ ಮಾಡಿಕೊಡಬೇಕು" ಎಂದು ಹೇಳಿದ್ದಾರೆ.
"ಅಧಿಕಾರಿಗಳ ಬಳಿ ಕೇಳಿದರೆ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಹೇಳುತ್ತಾರೆ. ಅವರು ವೇತನ ಪಡೆಯುವುದಿಲ್ಲವೇ?. ಕೇವಲ ಸಭೆಗಳನ್ನು ಮಾತ್ರ ಮಾಡಿದರೆ ಸಾಲದು, ಜನರ ಬದುಕಿಸುವ ಕಾರ್ಯವನ್ನು ಮಾಡಬೇಕು" ಎಂದಿದ್ದಾರೆ.
ಲಾಕ್ಡೌನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಲಾಕ್ಡೌನ್ ಜಾರಿ ಮಾಡಿದರೆ ಏನು ಪ್ರಯೋಜನ. ಹಗಲು ಹೊತ್ತು ಕೊರೊನಾ ಬರುವುದಿಲ್ಲವೇ?. ಜನರ ಜೀವದೊಂದಿಗೆ ಬದುಕು ಕೂಡಾ ಮುಖ್ಯ. ಹಾಗಾಗಿ ನಾವು ಲಾಕ್ಡೌನ್ಗೆ ವಿರೋಧಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಸರ್ಕಾರಕ್ಕೆ ಸಾರಿಗೆ ನೌಕರರನ್ನು ಕರೆದು ಮಾತನಾಡಿಸಲು ಸಮಸ್ಯೆ ಏನು?. ಖಾಸಗಿಯವರಿಗೆ ನೀಡಲು ಹೊರಟಿದ್ದೀರಾ?. ಮೊದಲು ಸರ್ಕಾರಿ ನೌಕರರನ್ನು ಕರೆದು ಮಾತನಾಡಿ" ಎಂದಿದ್ದಾರೆ.