ಬೆಂಗಳೂರು, ಏ. 18 (DaijiworldNews/HR): ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಏರಿಸಿ ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರೈತರನ್ನು ಸಾಯಿಸಲು ಪೈಪೋಟಿಗೆ ಇಳಿದಂತಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಅಂದಾಜು ರೂ.45,000 ಕೋಟಿಯಷ್ಟು ಕಡಿತಗೊಳಿಸಿರುವುದೇ ರಸಗೊಬ್ಬರ ಕಂಪೆನಿಗಳು ಬೆಲೆ ಏರಿಸಲು ಕಾರಣವಾಗಿದ್ದು, ಕೇಂದ್ರ ಸರ್ಕಾರ ಈ ಸತ್ಯವನ್ನು ಮುಚ್ಚಿಟ್ಟು ಸುಳ್ಳು ಕಾರಣಗಳನ್ನು ನೀಡುತ್ತಿದೆ" ಎಂದರು.
ಇನ್ನು "ಪ್ರಸ್ತುತ ಆರೂವರೆ ಲಕ್ಷ ಮೆಟ್ರಿಕ್ ಟನ್ ಡಿಎಪಿಗೆ ಬೇಡಿಕೆ ಇದ್ದು, ಈಗ ಇರುವ ದಾಸ್ತಾನು ಕೇವಲ 77,401 ಮೆ.ಟನ್ ಮಾತ್ರ. ಇದರಿಂದಾಗಿ ಹಳೆದಾಸ್ತಾನಿಗೆ ಹಳೆಯ ದರದ ಸೂಚನೆಯಿಂದ ರೈತರಿಗೆ ಯಾವ ಲಾಭವೂ ಆಗಲಾರದು, ಈಗಾಗಲೇ ರಸಗೊಬ್ಬರ ಕಂಪೆನಿಗಳು ಹೊಸದರದ ರಸಗೊಬ್ಬರವನ್ನು ಮಾರುಕಟ್ಟೆಗೆ ಸುರಿದಿವೆ. ಎಲ್ಲ ರಸಗೊಬ್ಬರಗಳ ಬೆಲೆಯನ್ನು ಸರಾಸರಿ ಶೇಕಡಾ 60ರಷ್ಟು ಹೆಚ್ಚಿಸಲಾಗಿದೆ" ಎಂದಿದ್ದಾಎರೆ.
"ಪ್ರಧಾನಿ ಮೋದಿ ಅವರು ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇನೆಂದು ಆಶ್ವಾಸನೆ ನೀಡಿದ್ದು, ಇದೀಗ ರಸಗೊಬ್ಬರದ ಬೆಲೆ ದುಪ್ಪಟ್ಟು ಮಾಡಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ದೇಶದಾದ್ಯಂತ ವಿರೋಧಿಸುತ್ತಿರುವ ರೈತರ ವಿರುದ್ಧ ಸೇಡುತೀರಿಸಿಕೊಳ್ಳುವ ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ರಸಗೊಬ್ಬರ ಕಂಪೆನಿಗಳ ಜೊತೆ ಷಾಮೀಲಾಗಿ ರೈತರನ್ನು ಸುಲಿಗೆ ಮಾಡಲು ಹೊರಟಂತಿದೆ" ಎಂದು ಹೇಳಿದ್ದಾರೆ.