ನವದೆಹಲಿ, ಏ.18 (DaijiworldNews/MB) : ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಕೊರೊನಾ ಎರಡನೇ ಅಲೆಯು ತೀವ್ರ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಪಶ್ಚಿಮಬಂಗಾಳದಲ್ಲಿನ ತನ್ನ ಎಲ್ಲಾ ರ್ಯಾಲಿಗಳನ್ನು ರದ್ದುಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ರಾಹುಲ್ ಗಾಂಧಿ ಅವರು ಮಾಹಿತಿ ನೀಡಿದ್ದಾರೆ. ''ಕೊರೊನಾ ಪರಿಸ್ಥಿತಿಯ ದೃಷ್ಟಿಯಿಂದ, ನಾನು ಪಶ್ಚಿಮ ಬಂಗಾಳದಲ್ಲಿ ನನ್ನ ಎಲ್ಲಾ ಸಾರ್ವಜನಿಕ ರ್ಯಾಲಿಗಳನ್ನು ರದ್ದುಗೊಳಿಸುತ್ತೇನೆ'' ಎಂದು ತಿಳಿಸಿದ್ದಾರೆ.
ಹಾಗೆಯೇ, ''ಪ್ರಸ್ತುತ ಸಂದರ್ಭಗಳಲ್ಲಿ ದೊಡ್ಡ ಸಾರ್ವಜನಿಕ ರ್ಯಾಲಿಯನ್ನು ನಡೆಸುವ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸಲು ನಾನು ಎಲ್ಲಾ ರಾಜಕೀಯ ಮುಖಂಡರಿಗೆ ಸಲಹೆ ನೀಡುತ್ತೇನೆ'' ಎಂದು ಕೂಡಾ ಹೇಳಿದ್ದಾರೆ.
ಇನ್ನು ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದಲ್ಲಿ ರ್ಯಾಲಿ ಒಂದನ್ನು ಉದ್ದೇಶಿಸಿ ಮಾತನಾಡಿ ನಾನು ಮೊದಲ ಬಾರಿಗೆ ಇಷ್ಟು ಭಾರೀ ಪ್ರಮಾಣದ ಗುಂಪನ್ನು ನೋಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಪ್ರಧಾನಿ ಕಾಲೆಳೆದಿರುವ ರಾಹುಲ್ ಗಾಂಧಿ, ಇಷ್ಟು ಪ್ರಮಾಣದಲ್ಲಿ ಅನಾರೋಗ್ಯ ಪೀಡಿತರು ಹಾಗೂ ಮೃತರನ್ನು ನಾವು ಮೊದಲು ಬಾರಿಗೆ ನೋಡಿದ್ದೇವೆ ಎಂದು ಹೇಳಿದ್ದಾರೆ.