ನಂಜನಗೂಡು,ಏ. 18 (DaijiworldNews/HR): ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದಲ್ಲಿ ಅಣ್ಣನ ಮನೆಗೆ ಕನ್ನ ಹಾಕಿದ ಖತರ್ನಾಕ್ ತಮ್ಮ ಇದೀಗ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಯುಗಾದಿ ಹಬ್ಬಕ್ಕಾಗಿ ಆಗಮಿಸಿದ್ದ ತಮ್ಮ ಮತ್ತು ಆತನ ಹೆಂಡತಿ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಿದ್ದು, ಇದೀಗ ಜೈಲು ಪಾಲಾಗಿದ್ದಾರೆ.
ಅಣ್ಣ ವೆಂಕಟರಾಜು ಎಂಬವರ ಮನೆಗೆ ಸ್ವಾಮಿ ಹಾಗೂ ಸುನಂದ ದಂಪತಿ ಯುಗಾದಿ ಹಬ್ಬಕ್ಕಾಗಿ ಬಂದಿದ್ದು, ಬಂದು ಒಂದು ವಾರ ತಂಗುವುದಾಗಿ ಹೇಳಿದ್ದರು. ಆದರೆ ಮರುದಿನವೇ ಬೆಂಗಳೂರಿಗೆ ಹಿಂದಿರುಗಿದ್ದರಿಂದ ಅಣ್ಣ ವೆಂಕಟರಾಜು ಅನುಮಾನಗೊಂಡು ಪರಿಶೀಲಿಸಿದಾದ ಕಳ್ಳತನ ನಡೆಸಿರುವುದು ಪತ್ತೆಯಾಗಿದೆ.
ಇನ್ನು ಮಗನ ಮದುವೆಗಾಗಿ 3.30 ಲಕ್ಷ ಹಣ ಕೂಡಿಟ್ಟಿದ್ದು ಅದನ್ನು ದೋಚಿದ ದಂಪತಿ ಅಲ್ಲಿಂದ ಪರಾರಿಯಾಗಿದ್ದಾರೆ.
ಬೀರುವಿನಲ್ಲಿಟ್ಟಿದ್ದ ಹಣವನ್ನು ಲಪಟಾಯಿಸಿದ್ದು, ಹಣದ ವಿಚಾರ ಕೇಳಿದಾಗ ಸಾಕ್ಷಿ ಏನಿದೆ ಎಂದು ಉತ್ತರಿಸಿದ್ದಾರೆ. ಇದರಿಂದ ಕುಪಿತಗೊಂಡ ವೆಂಕಟರಾಜು ಹುಲ್ಲಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಹುಲ್ಲಹಳ್ಳಿ ಪೊಲೀಸರು ಗಂಡ ಹೆಂಡತಿ ಇಬ್ಬರನ್ನು ಅರೆಸ್ಟ್ ಮಾಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.