ಹುಬ್ಬಳ್ಳಿ, ಎ.18 (DaijiworldNews/PY): ಬೈಕ್ ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಮಾನಸಿಕವಾಗಿ ನೊಂದುಕೊಂಡಿದ್ದ ಡಿಪೋ ಬಸ್ ನಿರ್ವಾಹಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಹಾನಗಲ್ ಡಿಪೋ ಬಸ್ ನಿರ್ವಾಹಕ ಮೌಲಾಸಾಬ್ ದಾವಲ್ ಸಾಬ್ ಮಿಶ್ರಿಕೋಟೆ (44) ಎಂದು ಗುರುತಿಸಲಾಗಿದೆ.
ಇವರು ಕುಂದಗೋಳ ತಾಲೂಕಿನ ಕೂಬಿಹಾಳ ಮೂಲದವರಾಗಿದ್ದು, ಬಂಡಿವಾಡದಲ್ಲಿ ವಾಸವಾಗಿದ್ದರು. ಎಂಟು ತಿಂಗಳ ಹಿಂದೆ ಇವರು ಮುಸ್ತಾಫಾ ಎನ್ನುವವರಿಗೆ ಬೈಕ್ ಅನ್ನು ಮಾರಿದ್ದರು. ಬೈಕ್ ಅನ್ಜು ಕದ್ದು ಮಾರಾಟ ಮಾಡುವ ಸಂದರ್ಭ ಮುಸ್ತಾಫಾ ಕೈಗೆ ಸಿಕ್ಕಿಬಿದ್ದಿದ್ದು, ಈ ಸಂದರ್ಭ ಮುಸ್ತಾಫಾ ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದ್ದರು ಎನ್ನಲಾಗಿದೆ.
ಇನ್ನು ಆತ್ಮಹತ್ಯೆಗೂ ಮುನ್ನ ಮೌಲಾಸಾಬ್ ಡೆತ್ನೋಟ್ ಬರೆದಿಟ್ಟಿದ್ದು, "ನನಗೆ ಮುಸ್ತಾಫಾ ಸೇರಿ ನಾಲ್ವರು ಮಾನಸಿಕ ಕಿರುಕುಳ ನೀಡಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯ ಬಗ್ಗೆ ಹುಬ್ಬಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.