ಪುಣೆ, ಏ.18 (DaijiworldNews/MB) : ಬಾರಾಮತಿಯ ಪೆನ್ಸಿಲ್ ಚೌಕ್ನಲ್ಲಿ ಶನಿವಾರ ಮೂರು ಬಾಟಲಿ ನಕಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ಕೊರೊನಾ ಚಿಕಿತ್ಸೆಗಾಗಿ ಬಳಸಲಾಗುವ ರೆಮ್ಡೆಸಿವಿರ್ ಎಂದು ಹೆಸರಿಸಲಾದ ಚುಚ್ಚುಮದ್ದು ಎಂದು ಹೇಳಿಕೊಂಡು ನಕಲಿ ಚುಚ್ಚುಮದ್ದನ್ನು ಈ ಆರೋಪಿಗಳು ಮಾರಾಟ ಮಾಡಿದ್ದಾರೆ. ಈ ಆರೋಪಿಗಳು ಪ್ಯಾರಸಿಟಮಲ್ ಮಾತ್ರೆಯನ್ನು ದ್ರವ ರೂಪದಲ್ಲಿ ರೆಮ್ಡೆಸಿವಿರ್ ಎಂದು ಹೇಳಿ ಮಾರಿದ್ದಾರೆ ಎಂದುಪುಣೆ ಗ್ರಾಮೀಣ ಪೊಲೀಸ್ ಅಧೀಕ್ಷಕ ಅಭಿನವ್ ದೇಶ್ಮುಖ್ ತಿಳಿಸಿದ್ದಾರೆ.
ನಕಲಿ ರೆಮ್ಡೆಸಿವಿರ್ ಬಾಟಲುಗಳನ್ನು ತಲಾ 35,000 ರೂ.ಗಳಿಗೆ ಮಾರಾಟ ಮಾಡಲು ಚೌಕ್ನಲ್ಲಿ ಒಬ್ಬ ವ್ಯಕ್ತಿಯು ಕಾರಿನಲ್ಲಿ ಆಗಮಿಸುತ್ತಿದ್ದಾನೆ ಎಂದು ಬಾರ್ಮತಿ ತಾಲೂಕು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಕಳುಹಿಸಿದ ವ್ಯಕ್ತಿಯೋರ್ವ ಆರೋಪಿ ಇಂದಾಪುರದ ಪ್ರಶಾಂತ್ ಘರತ್ (23) ಎಂಬಾತನಲ್ಲಿ ಎರಡು ಬಾಟಲುಗಳನ್ನು 70,000 ರೂ.ಗೆ ನೀಡುವಂತೆ ಒತ್ತಾಯಿಸುವ ಮೂಲಕ ಆತ ರೆಮ್ಡೆಸಿವಿರ್ ಬಾಟಲುಗಳನ್ನು ಮಾರಾಟ ಮಾಡುತ್ತಿದ್ದ ಎಂಬುದನ್ನು ಖಾತರಿ ಪಡಿಸಿಕೊಂಡಿದ್ದು ಬಳಿಕ ಪೊಲೀಸರು ಪ್ರಶಾಂತ್ ಘರತ್ನನ್ನು ಬಂಧಿಸಿ ಆತನಿಂದ ಎರಡು ಬಾಟಲುಗಳ ನಕಲಿ ರೆಮ್ಡೆಸಿವಿರ್ ಬಾಟಲ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ದೇಶ್ಮುಖ್ ವಿವರಿಸಿದ್ದಾರೆ.
ಘರತ್ ಹಾಗೂ ಇತರ ಮೂವರು ಖಾಲಿ ಬಾಟಲುಗಳಲ್ಲಿ ಪಾರಸಿಟಮಾಲ್ ದ್ರವವನ್ನು ತುಂಬಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರು ಇತ್ತೀಚೆಗೆ ಏಳು ನಕಲಿ ಬಾಟಲುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಆತನ ಸಹಚರರಾದ ಶಂಕರ್ ಭೀಸೆ (22) ಮತ್ತು ಬಾರಾಮತಿಯ ದಿಲೀಪ್ ಗಾಯಕ್ವಾಡ್ (25) ಮತ್ತು ಇಂದಾಪುರದ ಸಂದೀಪ್ ಗಾಯಕ್ವಾಡ್ (20) ಅನ್ನು ಬಂಧಿಸಿದ್ದಾರೆ.