ನವದೆಹಲಿ, ಎ.18 (DaijiworldNews/PY): "ಕೊರೊನಾದ ಎರಡನೇ ಅಲೆಯನ್ನು ನಿಯಂತ್ರಿಸುವ ತಯಾರಿ ಮಾಡಿಕೊಳ್ಳಲು ಒಂದು ವರ್ಷ ಕಾಲಾವಕಾಶ ಇದ್ದರೂ ಸರ್ಕಾರ ಅದನ್ನು ಮಾಡದೇ, ತಾತ್ಕಾಲಿಕ ಪರಿಹಾರಗಳನ್ನು ಮಾತ್ರವೇ ಮಾಡಿದೆ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, "ಕೊರೊನಾ ವಿರುದ್ದದ ಹೋರಾಟ ರಾಷ್ಟ್ರೀಯ ವಿಚಾರವಾಗಿದೆ. ಪಕ್ಷ ರಾಜಕಾರಣದಿಂದ ಇದನ್ನು ಹೊರಗಿಡಬೇಕು. ಕೇಂದ್ರ ಸರ್ಕಾರವು ಇಂತಹ ಪರಿಸ್ಥಿತಿಯ ವೇಳೆ ರಾಜಧರ್ಮ ಪಾಲನೆ ಮಾಡಬೇಕು. ಆದರೆ, ಕೇಂದ್ರ ಸರ್ಕಾರ ಬಿಜೆಪಿಯೇತರ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳ ಬೇಡಿಕೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮೌನ ವಹಿಸುತ್ತಿದೆ" ಎಂದಿದ್ದಾರೆ.
"ನಮ್ಮ ದೇಶದ ಜನರು ಸಾಯುತ್ತಿರುವಾಗ, ಉಳಿದ ದೇಶಗಳಿಗೆ ಲಸಿಕೆ ನೀಡುವ ಮುಖೇನ ನಮ್ಮ ಔದಾರ್ಯದ ಬಗ್ಗೆ ಹೇಗೆ ಹೆಮ್ಮೆಪಟ್ಟುಕೊಳ್ಳಲು ಸಾಧ್ಯ?" ಎಂದು ಕೇಳಿದ್ದಾರೆ.