ಬೆಂಗಳೂರು, ಏ.18 (DaijiworldNews/MB) : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಪ್ರಸಂಗಕರ್ತೃ, ವಾಗ್ಮಿ ಎಂ.ಎ.ಹೆಗಡೆ (73) ಅವರು ರವಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಉಸಿರಾಟದ ಸಮಸ್ಯೆಯಿಂದ ನಿಧನರಾದರು.
ಎಂ.ಎ.ಹೆಗಡೆ ಅವರಿಗೆ ರವಿವಾರ ಮುಂಜಾನೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆಗೆ ಸ್ಪಂದಿಸಲ್ಲಿಲ್ಲ ಎಂದು ವರದಿಯಾಗಿದೆ.
ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿಸಿ ಜಬಿನ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದ ಅವರು ಬಳಿಕ ಸಂಸ್ಕೃತ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಮಹಾಬಲೇಶ್ವರ ಹೆಗಡೆ ಅವರು ಕಲೆ, ಕಲಾವಿದರ ಉನ್ನತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ.
ಯಕ್ಷಗಾನದಲ್ಲಿ ಅಧಿಕ ಆಸಕ್ತಿ ಹೊಂದಿರುವ ಅವರು, ಸ್ವತಃ ಪಾತ್ರಧಾರಿಯು ಆಗಿದ್ದು ಸೀತ ವಿಯೋಗ, ತ್ರಿಶಂಕು ಚರಿತೆ, ರಾಜಾ ಕಂದಾಮ ಸೇರಿದಂತೆ 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಹಾಗೆಯೇ ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪರಿಚಯ, ಬ್ರಹ್ಮಸೂತ್ರ ಚತು, ಸೂತ್ರಿ, ಮತ್ತು ಸಿದ್ಧಾಂತ ಬಿಂದು ಮೊದಲಾದ ಗ್ರಂಥಗಳನ್ನು ಕೂಡಾ ಅವರು ರಚಿಸಿದ್ದಾರೆ.