ನವದೆಹಲಿ, ಏ. 18 (DaijiworldNews/HR): ಕೊರೊನಾದ ಎರಡನೇ ಅಲೆಯಿಂದಾಗಿ ಹೆಚ್ಚು ತೊಂದರೆಗೀಡಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಸುಮಾರು 1.17 ಕೋಟಿ ಡೋಸ್ ಲಸಿಕೆ ಪೂರೈಸಲಾಗುವುದು ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಈ ಕುರಿತು ರಾಜ್ಯಗಳ ಸಚಿವರ ಜತೆ ಪರಾಮರ್ಶೆ ಸಭೆ ನಡೆಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ಈವರೆಗೆ 14.15 ಕೋಟಿ ಡೋಸ್ ಲಸಿಕೆ ಕಳುಹಿಸಿಕೊಟ್ಟಿದ್ದು, ಅದರಲ್ಲಿ 12.57 ಕೋಟಿ ಡೋಸ್ ಲಸಿಕೆ ಬಳಸಲಾಗಿದೆ" ಎಂದರು.
"1.50 ಕೋಟಿ ಡೋಸ್ ಲಸಿಕೆಗಳು ರಾಜ್ಯ ಸರ್ಕಾರಗಳ ಬಳಿ ಲಭ್ಯವಿದ್ದು, ಇನ್ನೂ 1.17 ಕೋಟಿ ಡೋಸ್ ಲಸಿಕೆಗಳನ್ನು ಮುಂದಿನ ವಾರದ ಒಳಗೆ ಪೂರೈಸಲಾಗುವುದು. ಪ್ರತಿ ಸಣ್ಣ ರಾಜ್ಯಗಳಿಗೂ ಅವುಗಳ ಪಾಲನ್ನು 7 ದಿನಗಳಿಗೆ ಒಂದು ಬಾರಿಯಂತೆ ಕಳುಹಿಸಿಕೊಡಲಾಗುತ್ತದೆ. ದೊಡ್ಡ ರಾಜ್ಯಗಳಿಗೆ 4 ದಿನಗಳಿಗೊಮ್ಮೆ ಕಳುಹಿಸಿಕೊಡಲಾಗುತ್ತದೆ ಎಂದಿದ್ದಾರೆ.
ಇನ್ನು ಎಲ್ಲ ರಾಜ್ಯಗಳು ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಕೊರತೆ ವಿಷಯ ಪ್ರಸ್ತಾಪಿಸಿದ್ದು, ಇವೆರಡರ ಉತ್ತಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದ್ದಾರೆ.