ಬೆಂಗಳೂರು, ಏ. 17 (DaijiworldNews/HR): ಸಾರಿಗೆ ನೌಕರರು ನಡೆಸುತ್ತಿರುವಂತ ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಇದೀಗ ಸಾರಿಗೆ ನೌಕರರು ಸೋಮವಾರದಿಂದ ಜೈಲ್ ಭರೋ ಚಳುವಳಿಗೆ ಕರೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, "ರಾಜ್ಯ ಸರ್ಕಾರ ಸಾರಿಗೆ ನೌಕರರ ಬಗ್ಗೆ ತಿರಸ್ಕಾರ ತೋರುತ್ತಿದ್ದು, ನೌಕರರ ಮನೆ ಮುಂದೆ ಹೋಗಿ ಅವರನ್ನ ಮಾನಸಿಕವಾಗಿ ಘಾಸಿಗೊಳಿಸುವಂತ ಕೆಲಸಕ್ಕೆ ಇಳಿದಿದೆ. ಈ ಕಾರಣಕ್ಕಾಗಿ ಕೆಲ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದರು.
ಇನ್ನು "ಸೋಮವಾರದಿಂದ ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ತೀವ್ರಗೊಳಿಸಲಾಗುತ್ತಿದ್ದು, ಈ ಮೂಲಕ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಅಲ್ಲದೇ ಸಾರಿಗೆ ನೌಕರರ ಸಮಸ್ಯೆ ಬಗ್ಗೆ ರಾಜ್ಯಪಾಲರಿಗೂ ಮನವಿ ಪತ್ರ ನೀಡಲಾಗುತ್ತದೆ. ರಾಜ್ಯಪಾಲರ ಮಧ್ಯಪ್ರವೇಶಕ್ಕೂ ಒತ್ತಾಯಿಸಲಾಗುತ್ತಿದೆ. ಜೊತೆಗೆ ಸೋಮವಾರದಿಂದ ಜೈಲ್ ಭರೋ ಚಳುವಳಿ ಕೂಡ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.