ಕೋಲ್ಕತ್ತಾ, ಏ. 17 (DaijiworldNews/HR): ನನ್ನ ಪೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಮತದಾನದ ವೇಳೆ ಕೋಚ್ ಬಿಹಾರ್ನಲ್ಲಿ ನಡೆದ ಭದ್ರತಾ ಪಡೆಗಳ ಗುಂಡಿನ ದಾಳಿಗೆ ನಾಲ್ಕು ಜನರು ಸಾವನ್ನಪ್ಪಿದದು, ಅವರ ಮೃತದೇಹಗಳನ್ನಿಟ್ಟುಕೊಂಡು ಚುನಾವಣಾ ಜಾಥಾ ಕೈಗೊಳ್ಳುವಂತೆ ಸಿತಾಲ್ಕುಚಿ ವಿಧಾನ ಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಗೆ ಮಮತಾ ಸೂಚನೆ ನೀಡಿದ್ದರು ಎನ್ನುವ ಆಡಿಯೋ ಕ್ಲಿಪ್ ಶುಕ್ರವಾರ ಬಿಜೆಪಿ ಬಿಡುಗಡೆ ಮಾಡಿದ್ದು, ಇದು ರಾಜಕೀಯ ವಲಯದಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ.
ಇನ್ನು ಬಿಜೆಪಿ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಕುರಿತು ಇಂದು ಚುನಾವಣಾ ಪ್ರಚಾರದ ವೇಳೆ ಪ್ರತಿಕ್ರಿಯಿಸಿರುವ ಮಮತಾ, ನನ್ನ ಮೊಬೈಲ್ ಫೋನ್ ಟ್ಯಾಪ್ ಮಾಡಲಾಗಿದದು, ಈ ಕುರಿತು ಸಿಐಡಿ ತನಿಖೆ ನಡೆಸಲಾಗುವುದು" ಎಂದರು.
"ಅಭಿವೃದ್ಧಿ ಕಾರ್ಯದಲ್ಲಿ ನಮ್ಮ ಎದುರು ನಿಲ್ಲಲಾಗದೆ ಬಿಜೆಪಿಯವರಿಂದ ಈ ರೀತಿಯ ಪಿತೂರಿ ನಡೆಸುತ್ತಿದೆ. ಪ್ರತಿದಿನದ ನಮ್ಮ ಮಾತುಕತೆಯನ್ನು ಬಿಜೆಪಿ ನಾಯಕರು ಕದ್ದಾಲಿಸುತ್ತಿದ್ದಾರೆ. ಅವರು ನಮ್ಮ ಪೋನ್ ಟ್ಯಾಪ್ ಮಾಡಿರುವುದು ಇದರಿಂದ ಗೊತ್ತಾಗುತ್ತಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಿಐಡಿ ತನಿಖೆಗೆ ಆದೇಶ ನೀಡುತ್ತದೆ. ಈ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ನನಗೆ ಗೊತ್ತಾಗಿದೆ" ಎಂದು ಹೇಳಿದ್ದಾರೆ.