ಮುಂಬೈ, ಏ.17 (DaijiworldNews/MB) : ''ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುವ ಕುಂಭಮೇಳದಲ್ಲಿ ಭಾಗಿಯಾಗಿ ವಾಪಾಸ್ ಬರುವವರು ತಮ್ಮ ರಾಜ್ಯಗಳಲ್ಲಿ ಕೊರೊನಾ ಸೋಂಕನ್ನು ಪ್ರಸಾದದಂತೆ ವಿತರಣೆ ಮಾಡಲಿದ್ದಾರೆ'' ಎಂದು ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಹೇಳಿದ್ದಾರೆ.
ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ನಡುವೆ ಲಕ್ಷಾಂತರ ಭಕ್ತಾಧಿಗಳು ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಿಶೋರಿ ಅವರು, ''ಈ ಕುಂಭಮೇಳದಲ್ಲಿ ಭಾಗಿಯಾದವನ್ನು ಎಲ್ಲಾ ರಾಜ್ಯಗಳಲ್ಲಿ ಅವರ ಸ್ವಂತ ಖರ್ಚಿನಲ್ಲೇ ಕ್ವಾರಂಟೈನ್ನಲ್ಲಿ ಇರಿಸಬೇಕು. ನಾವು ಮುಂಬೈನಲ್ಲಿ ಕುಂಭಮೇಳಕ್ಕೆ ಹೋದವರನ್ನು ಕ್ವಾರಂಟೈನ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ'' ಎಂದು ಹೇಳಿದರು.
''ಮುಂಬೈನ ಶೇ.95ರಷ್ಟು ಜನರು ಕೊರೊನಾ ಮಾರ್ಗಸೂಚಿಗೆ ಗೌರವ ನೀಡುತ್ತಿದ್ದಾರೆ. ಆದರೆ ಉಳಿದ ಶೇ.5ರಷ್ಟು ಮಂದಿ ಯಾವುದೇ ನಿಯಮದ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದ ಅವರು, ಸದ್ಯದ ಕೊರೊನಾ ಪರಿಸ್ಥಿತಿಯನ್ನು ನೋಡಿದರೆ ಸಂಪೂರ್ಣ ಲಾಕ್ಡೌನ್ ಮಾಡಬೇಕಾಗುತ್ತದೆ'' ಎಂದು ಅಭಿಪ್ರಾಯಿಸಿದರು.
ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದು, ಗಂಗಾ ನದಿಯ ದಡದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಇಲ್ಲದೆ ಜಮಾಯಿಸಿದ್ದರು. ಇದು ಕೊರೊನಾ ಸೋಂಕು ಹರಡುವ ಭೀತಿಗೆ ಕಾರಣವಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ನಿಜಾಮುದ್ದೀನ್ ಪ್ರಕರಣ ಮತ್ತು ಈ ಕುಂಭಮೇಳವನ್ನು ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಈ ರೀತಿ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದರು.