ಕೊಲ್ಕತ್ತಾ, ಏ. 17 (DaijiworldNews/HR): ಪಶ್ಷಿಮ ಬಂಗಾಳದಲ್ಲಿ ಶವಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಅಸನ್ಸೋಲ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ , "ಶವಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಹಳೆಯ ಚಾಳಿಯನ್ನು ಮಮತಾ ಇನ್ನು ಕೂಡ ಮುಂದುವರಿಸಿದ್ದಾರೆ. ಕೂಚ್ ಬಿಹಾರ್ ಜಿಲ್ಲೆಯ ಸೀತಾಲಕುಚಿಯಲ್ಲಿ ದುರದೃಷ್ಟವಶಾತ್ ಮೃತಪಟ್ಟ ಐವರ ಸಾವಿಗೆ ರಾಜಕೀಯ ಬಣ್ಣ ಬಳಿಯಲು ಮಮತಾ ಯತ್ನಿಸುತ್ತಿದ್ದಾರೆ" ಎಂದರು.
ಇನ್ನು "ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ದುರಹಂಕಾರಿ' ಮತ್ತು ಕೇಂದ್ರ ಸರ್ಕಾರದ ಸಭೆಗಳಿಗೆ ಹಾಜರಾಗುವುದಿಲ್ಲ. ಮಮತಾ ದುರಹಂಕಾರಿಯಾಗಿದ್ದಾರೆ ಮತ್ತು ಅವರು ವಿಭಿನ್ನ ನೆಪಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರದ ಸಭೆಗಳಿಗೆ ಹಾಜರಾಗುವುದಿಲ್ಲ. ಅವರು ಯಾವುದೇ ಕೇಂದ್ರ ಸರ್ಕಾರದ ಸಭೆಯಲ್ಲಿ ಭಾಗವಹಿಸಲಿಲ್ಲ" ಎಂದರು.
"ನಾವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರಳಿ ತರುತ್ತೇವೆ. ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾತ್ರ ನಡೆಯುತ್ತಿದೆ. ಮಮತಾ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿರೋಧಿಸಿದ್ದಾರೆ. ಸರ್ಕಾರ ನಿಲ್ಲಿಸಿರುವ ಎಲ್ಲಾ ಯೋಜನೆಗಳನ್ನು ನಾವು ಬಂಗಾಳದಲ್ಲಿ ತರುತ್ತೇವೆ" ಎಂದು ಹೇಳಿದ್ದಾರೆ.