ಬೆಂಗಳೂರು, ಏ 17 (DaijiworldNews/MS): ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಸೋಂಕಿನ ೨ ನೇ ಅಲೆಯೂ ರಾಜ್ಯ ರಾಜಧಾನಿಯಲ್ಲಿ ತನ್ನ ಕಬಂಧ ಬಾಹು ಚಾಚುತ್ತಿರುವಂತೆಯೇ , ರಾಜ್ಯ ಸರ್ಕಾರ ವಿಧಾನಸೌಧ, ವಿಕಾಸಸೌಧ ಹಾಗೂ ಶಾಸಕರ ಭವನ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ.
ಒಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಜೆಡಿಎಸ್ ಮುಖಂಡ ಕುಮಾರಸ್ವಾಮಿ, ಸವದತ್ತಿ ಶಾಸಕ ಆನಂದ ಹೀಗೆ ಸಾಲು ಸಾಲು ರಾಜಕಾರಣಿಗಳಿಗೆ ಕೊರೊನಾ ದೃಢಪಟ್ಟಿದೆ. ವಿಧಾನಸೌಧ ಮತ್ತು ವಿಕಾಸ ಸೌಧಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಲು ಕೆಲಸದ ನಿಮಿತ್ತ ಆಗಮಿಸುತ್ತಾರೆ. ಯಾರನ್ನೂ ಕೂಡ ಪರೀಕ್ಷೆಗೊಳಪಡಿಸದೆ ನೇರವಾಗಿ ಒಳಬಿಡುವುದರಿಂದ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಆತಂಕ ಸಹಜವಾಗಿದೆ
ಮುಂಜಾಗ್ರತಾ ಕ್ರಮವಾಗಿ ಸಚಿವಾಲಯವು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದು, ಸಚಿವರು ಮತ್ತು ಅಧಿಕಾರಿಗಳನ್ನು ತುರ್ತಾಗಿ ಭೇಟಿ ಮಾಡುವವರು ವಿಧಾನ ಸೌಧದ ಸ್ವಾಗತ ಕೇಂದ್ರದಲ್ಲಿ ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.