ಬೆಂಗಳೂರು, ಎ.17 (DaijiworldNews/PY): ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಹಲವು ನಾಯಕರಿಗೆ ಕೊರೊನಾ ತಗುಲಿದೆ. ಬಿಜೆಪಿ, ಕಾಂಗ್ರೆಸ್ನ ಪ್ರಮುಖ ನಾಯಕರಿಗೆ ಕೊರೊನ ಸೋಂಕು ತಗುಲಿದ್ದು, ಅವರ ಸಂಪರ್ಕಕ್ಕೆ ಬಂದವರಿಗೂ ಆತಂಕ ಸೃಷ್ಟಿಸಿದೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸವದತ್ತಿ ಶಾಸಕ ಆನಂದ ಮಾಮನಿ, ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್, ಸುರಪುರ ಶಾಸಕ ರಾಜು ಗೌಡ, ಬೀದರ್ ಶಾಸಕ ಈಶ್ವರ್ ಖಂಡ್ರೆ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಸ್ಕಿ ಚುನಾವಣೆ ಉಸ್ತುವಾರಿ ವಹಿಸಿದ್ದ ಬಿ.ವೈ ವಿಜಯೇಂದ್ರ ಅವರ ಆಪ್ತ ತಮ್ಮೇಶ ಗೌಡ, ಇಬ್ಬರು ಗನ್ ಮ್ಯಾನ್ಗಳಿಗೂ ಕೊರೊನಾ ಸೋಂಕು ತಗುಲಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೋದರ ಚನ್ನರಾಜ ಹಟ್ಟಿಹೊಳಿ ಅವರಿಗೂ ಕೂಡಾ ಕೊರೊನಾ ತಗುಲಿದೆ.
ಇದಲ್ಲದೇ, ಕೇರಳ ಸಿಎಂ ಪಿಣರಾಯಿ ವಿಜಯನ್, ತಮಿಳುನಾಡು ಅರವಿಕುರಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಪ್ರಿಲ್ 16ರ ಶುಕ್ರವಾರ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಮಾಜಿ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರಿಗೂ ಕೊರೊನಾ ಸೋಂಕು ತಗುಲಿದೆ.
ಬಸವ ಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿದ್ದ ಪಕ್ಷದ ಕೆಲವರಿಗೆ ಕೊರೊನಾ ಸೋಂಕು ತಗುಲಿದ್ದು, ಮುನ್ನೆಚ್ಚರಿಕ ಕ್ರಮವಾಗಿ ವೈದ್ಯರ ಸಲಹೆಯಂತೆ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿದ್ದು, "ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ನಾನು ಕೆಲವು ದಿನಗಳ ಕಾಲ ತೊಡಗಿದ್ದ ಸಂದರ್ಭದಲ್ಲಿ ನನ್ನೊಂದಿಗೆ ಭಾಗವಹಿಸಿದ್ದ ಕೆಲವರಿಗೆ ಕೋವಿಡ್ ಸೋಂಕು ತಗುಲಿದ್ದು ಕಂಡುಬಂದಿದೆ. ಅಷ್ಟೇ ಅಲ್ಲ, ನನ್ನ ಗನ್ಮ್ಯಾನ್ಗೂ ಕೂಡಾ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ" ಎಂದಿದ್ದಾರೆ.
"ಈ ಹಿನ್ನೆಲೆಯಲ್ಲಿ ನಾನು ವೈದ್ಯರ ಸಲಹೆ ಪಡೆದಿದ್ದು, ಕೆಲವು ದಿನಗಳ ಕಾಲ ನನಗೆ ಕ್ವಾರಂಟೈನ್ ಆಗಲು ವೈದ್ಯರು ಸೂಚಿಸಿದ್ದಾರೆ. ಆ ಪ್ರಕಾರ ನಾನು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಈಗಾಗಲೇ ನಾನು ಕೋವಿಡ್ ಲಸಿಕೆಯನ್ನೂ ಹಾಕಿಸಿಕೊಂಡಿದ್ದೇನೆ. ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ" ಎಂದು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಅವರ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಹೆಚ್ಡಿಕೆ ಅವರಿಕೆ ಅವರಿಗೆ ಕೊರೊನಾ ದೃಢಪಟ್ಟ ಕಾರಣ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೂ ಕೂಡಾ ಕೊರೊನಾ ಪರೀಕ್ಷೆ ಒಳಗಾಗಿದ್ದರು. ಅವರಿಗೂ ಪ್ರಾಥಮಿಕ ವರದಿಯಿಂದ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.