ಬೆಂಗಳೂರು, ಏ.17 (DaijiworldNews/MB) : ಕೊರೊನಾ ಸೋಂಕು ಹರಡುತ್ತಿರುವ ಕಾರಣ ರಾಜ್ಯದಲ್ಲಿ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಜಾತ್ರೆಗಳು ನಡೆದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಎಚ್ಚರಿಕೆ ನೀಡಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ವಿಡಿಯೊ ಸಂವಾದ ಮಾಡಿದ್ದು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಅವರು, ''ರಾಜ್ಯದಲ್ಲಿ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಜಾತ್ರೆಗಳು ನಡೆದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ, ಸಣ್ಣ ಜಾತ್ರೆಗಳಾದರೆ ತಹಶೀಲ್ದಾರ್ ಹೊಣೆ'' ಎಂದು ಹೇಳಿದರು.
''ಜಿಲ್ಲಾಧಿಕಾರಿಗಳ ಅನುಮತಿ ಪಡೆದೇ ಕಲ್ಯಾಣ ಮಂಟಪ ಬುಕ್ ಮಾಡಬೇಕು. ಈಗಾಗಲೇ ಬುಕ್ ಮಾಡಿದ್ದರೆ ಸಮಸ್ಯೆಯಿಲ್ಲ. ಆದರೆ ಇನ್ನು ಅನುಮತಿ ಕಡ್ಡಾಯ. ಬಳಿಕ ಜಿಲ್ಲಾಡಳಿತ ನಿಗದಿತ ಸಂಖ್ಯೆಯ ಪಾಸ್ ವಿತರಿಸಲಿದೆ. ಅಧಿಕ ಪಾಸ್ ನೀಡಿದರೆ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮದುವೆ ಮನೆಯಲ್ಲಿ ಜನಸಂಖ್ಯೆ ಅಧಿಕವಾಗಿದ್ದರೆ ಎಫ್ಐಆರ್ ದಾಖಲಿಸಲಾಗುವುದು'' ಎಂದು ಕಂದಾಯ ಸಚಿವ ಆರ್. ಅಶೋಕ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಿಸಿದರು.