ಬೆಂಗಳೂರು, ಏ. 17 (DaijiworldNews/HR): ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ, ಬಿಜೆಪಿ ಪಕ್ಷದ ಅಭ್ಯರ್ಥಿಯ ವಿರುದ್ಧವೇ ನಿಂತಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಸಿದ್ದರಾಮಯ್ಯ ಖೂಬಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯ ಅಧ್ಯಕ್ಷರಾದಂತ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
"ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಸಿದ್ದರಾಮಯ್ಯ ಖೂಬಾ ಆದ ನೀವು ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶರಣ ಸಲಗಾರ ಇವರ ವಿರುದ್ಧ ಬಂಡುಕೋರ ಅಭ್ಯರ್ಥಿಯಾಗಿ ನಿಂತು ನಮ್ಮ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ. ಪಕ್ಷದಿಂದ ಎಲ್ಲಾ ರೀತಿಯ ಕೊನೆ ಗಳಿಗೆಯ ಪ್ರಯತ್ನಗಳು ನಡೆದಾಗಲೂ ಕೂಡ ನೀವು ಚುನಾವಣಾ ಕಣದಿಂದ ಹಿಂದೆ ಸರಿಯಲಿಲ್ಲ. ಈ ಕಾರಣದಿಂದಾಗಿ ಪಕ್ಷ ವಿರೋಧಿ ಚಟುವಟಿಕೆಗಾಗಿ ನಿಮ್ಮನ್ನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.