ಬೆಂಗಳೂರು, ಏ.17 (DaijiworldNews/MB) : ಬೆಡ್ ಹಾಗೂ ಆಂಟಿವೈರಲ್ ಔಷಧಿ ರೆಮ್ಡೆಸಿವಿರ್ ಕೊರೆತೆಯಿಂದ ಬೆಂಗಳೂರು ಮೂಲದ ಲ್ಯಾಬ್ನ ಆಂತರಿಕ ಔಷಧ ತಜ್ಞ ವೈದ್ಯರು ಗುರುವಾರ ತನ್ನ ಕೊರೊನಾ ಸೋಂಕಿತ 70 ವರ್ಷದ ತಂದೆಯನ್ನು ಕಳೆದುಕೊಂಡಿದ್ದಾರೆ. ಅವರ ತಂದೆ ಕಿಡ್ನಿ ತೊಂದರೆಯಿಂದಲೂ ಬಳಲುತ್ತಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಾ. ಅಶ್ವಿನಿ ಸರೋದೆ, ಅನೇಕ ಆಸ್ಪತ್ರೆಗಳಲ್ಲಿನ ವೈದ್ಯರೊಂದಿಗೆ ಸಂಪರ್ಕ ಹೊಂದಿದ್ದರೂ ಸಹ, ಯಾವುದೇ ಉನ್ನತ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ರೆಮ್ಡೆಸಿವಿರ್ನ ಡೋಸೇಜ್ಗಳಲ್ಲಿ ತನ್ನ ತಂದೆಗೆ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಮಂಗಳವಾರ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಇದಕ್ಕೂ ಮುನ್ನ ಅವರು ಸುಮಾರು 10 ದಿನಗಳ ಕಾಲ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಡ್ ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ಕೂಡಾ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ವೈದ್ಯೆಯ 60 ವರ್ಷದ ತಾಯಿ ಮತ್ತೊಂದು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿಯೇ ನನ್ನ ತಂದೆಗೆ ಸೋಂಕು ತಗುಲಿದೆಯೇ ಎಂದು ನಮಗೆ ತಿಳಿದಿಲ್ಲ. ನನ್ನ ತಾಯಿ ಆಸ್ಪತ್ರೆಯಲ್ಲಿ ಅವರೊಂದಿಗೆ ಇದ್ದರು. ಈಗ ಅವರಿಗೂ ಕೊರೊನಾ ಸೋಂಕು. ಮನೆಯಲ್ಲಿ ಬೇರೆ ಯಾರಿಗೂ ಸೋಂಕು ತಗುಲಿಲ್ಲ ಎಂದು ಕೂಡಾ ವೈದ್ಯೆ ಹೇಳಿದ್ದಾರೆ.
ತಂದೆಗೆ ರೆಮ್ಡೆಸಿವಿರ್ ತೀರಾ ಅಗತ್ಯವಾಗಿತ್ತು. ಬೆಡ್ಗಳು ಕೂಡಾ ಅವರಿಗೆ ಸಿಕ್ಕಿಲ್ಲ ಎಂದು ವೈದ್ಯೆ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೈಸೂರು ರಸ್ತೆಯ ಸ್ಪಾರ್ಶ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸ್ಮಿತಾ ಟಿ, ಕೊರೊನಾ ಸೋಂಕು ತೀವ್ರವಾಗಿದ್ದರೆ ಮಾತ್ರ ರೆಮ್ಡೆಸಿವಿರ್ ನೀಡಲಾಗುತ್ತದೆ. ಆದರೆ ಔಷಧದ ಕೊರತೆಯಿದೆ. ಆದರೆ ಡಾ. ಅಶ್ವಿನಿ ತಂದೆಗೆ ಈ ಸಂದರ್ಭದಲ್ಲಿ ಆ ಜೌಷಧಿ ಸಹಾಯ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಸಾವು ವೈದ್ಯಕೀಯ ಸಮುದಾಯವನ್ನೇ ನಡುಗಿಸಿದೆ. ನಾನು ಕೆಲಸ ಮಾಡುವ ಸ್ಥಳದಲ್ಲೇ ತನಗೆ ಹಾಸಿಗೆ ಪಡೆಯಲು ಸಾಧ್ಯವಾಗದಿರುವುದು ಭಾರೀ ಬೇಸರದ ವಿಚಾರ. ಎಂದು ಬೆಂಗಳೂರು ಮೂಲದ ನೆಫ್ರಾಲಜಿಸ್ಟ್ ಮತ್ತು ಡಾ. ಅಶ್ವಿನಿ ಅವರ ಮಾಜಿ ಸಹೋದ್ಯೋಗಿ ಡಾ.ಶಂಕರನ್ ಸುಂದರ್ ಹೇಳಿದರು.
ನನ್ನ ಮಾಜಿ ಸಹೋದ್ಯೋಗಿಯ ತಂದೆಗೆ ಸಹಾಯ ಮಾಡಲು ನನಗೆ ಸಾಧ್ಯವಾಗಲಿಲ್ಲ ಎಂದು ನನಗೆ ಅಪರಾಧ ಪ್ರಜ್ಞೆ ಮತ್ತು ದುಃಖವಿದೆ. ನಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಕಿಡ್ನಿ ಕಸಿ ಮಾಡಬೇಕಾದ ಕೊರೊನಾ ರೋಗಿಗಳಿಗೆ ರೆಮ್ಡೆಸಿವಿರ್ ಅಗತ್ಯವಿದೆ. ಆದರೆ ನನಗೆ ಯಾವುದೇ ಸಹಾಯ ಮಾಡಲು ಆಗದಿರುವುದಕ್ಕೆ ನಾನು ಕ್ಷಮೆಯಷ್ಟೇ ಕೋರಬಹುದು ಎಂದು ಹೇಳಿದ್ದಾರೆ.