ಬೆಂಗಳೂರು, ಎ.17 (DaijiworldNews/PY): ಹೆಚ್ಚುತ್ತಿರುವ ಕೊರೊನಾದಿಂದ ಮೇ ತಿಂಗಳಿನಲ್ಲಿ ನಡೆಯಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯಲಿದೆಯೊ ಇಲ್ಲವೋ ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿದೆ.
ರಾಜ್ಯ ಚುನಾವಣಾ ಆಯುಕ್ತ ಡಾ. ಬಿ ಬಸವರಾಜು ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರವದಿ ಮೇ ತಿಂಗಳ ಅಂತ್ಯದಲ್ಲಿ ಮುಗಿಯಲಿದೆ. ಚುನಾವಣೆಯನ್ನು ಅಂತಿಮ ಗಡುವಿನೊಳಗೆ ನಡೆಸಲು ಸಿದ್ದತೆ ಮಾಡಲಾಗುತ್ತಿದೆ. ಕೊರೊನಾ ಸಮಸ್ಯೆ ಹೆಚ್ಚಾದಲ್ಲಿ ಚುನಾವಣೆಯು ಜೂನ್ ತಿಂಗಳಿನಲ್ಲಿ ನಡೆಯುತ್ತದೆ" ಎಂದು ತಿಳಿಸಿದ್ದಾರೆ.
"ಸರಿಯಾದ ಸಮಯಕ್ಕೆ ಚುನಾವಣೆ ನಡೆಸಲು ಸಂವಿಧಾನಬದ್ದ ಆದೇಶವಿದೆ. ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆ ವಿಳಂವಾದ್ದರಿಂದ ಎಸ್ಇಸಿ ಚುನಾವಣೆ ನಡೆಸುವಂತೆ ಕೆಲವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು. ಬಳಿ ನಾವು ಚುನಾವಣೆಯನ್ನು ನಡೆಸಿದೆವು. ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಯಾವುದೇ ವಿಳಂಬದ ಪ್ರಶ್ನೆಯಿಲ್ಲ" ಎಂದಿದ್ದಾರೆ.
"ನಾವು ಮತದಾರರ ಪಟ್ಟಿ ಹಾಗೂ ಮೀಸಲಾತಿ ಪಟ್ಟಿಯನ್ನು ಸಿದ್ದಪಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಕಳೆದ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಈ ಚುನಾವಣೆಗಳಲ್ಲಿ ಈ ಬಾರಿ ಬಿಜೆಪಿ ಉತ್ತಮ ಸಾಧನೆ ತೋರಲಿದೆ. ಚುನಾವಣೆಗೆ ನಾವು ತಯಾರಿ ನಡೆಸುತ್ತಿದ್ದೇವೆ. ಆದರೆ, ಕೊರೊನ ಹೆಚ್ಚುತ್ತಿರುವ ಕಾರಣ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುತ್ತದೆಯೋ ಎನ್ನುವ ಬಗೆಗಿನ ಆತಂಕವಿದೆ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂಎಲ್ಸಿ ರವಿ ಕುಮಾರ್ ತಿಳಿಸಿದ್ದಾರೆ.
"ನಾವು ಚುನಾವಣೆಗೆ ತಯಾರಿದ್ದೇವೆ. ಪರಿಸ್ಥಿತಿ ಸಮಂಜಸವಾಗಿ ಸುರಕ್ಷಿತವಾದ ಬಳಿಕ ನಾವು ಮತದಾನ ನಡೆಸಬಹುದು" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
"ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ನಾವು ಚುನಾವಣೆಯನ್ನು ಹೇಗೆ ನಡೆಸಬಹುದು?. ಎಸ್ಇಸಿ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಸುಧಾರಿಸುವ ತನಕ ಚುನಾವಣೆಯನ್ನು ಮುಂದೂಡಬೇಕಾಗಬಹುದು" ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.