ನವದೆಹಲಿ, ಏ. 17 (DaijiworldNews/HR): ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರೈಲುಗಳಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 500 ರೂಪಾಯಿಯವರೆಗೆ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ.
ಸಾಂಧರ್ಭಿಕ ಚಿತ್ರ
ಈ ಆದೇಶವನ್ನುಮುಂದಿನ 6 ತಿಂಗಳವರೆಗೆ ಜಾರಿಗೆ ತರಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಕೊರೊನಾ ನಿಯಂತ್ರಣ ಮತ್ತು ಸಂಬಂಧಪಟ್ಟ ಸ್ವಚ್ಛತೆಗೆ ಸಂಬಂಧಿಸಿದಂತೆ ರೈಲ್ವೆಗಳಲ್ಲಿ ಬೇಯಿಸಿದ ಆಹಾರದ ಬದಲಿಗೆ ಸಿದ್ಧಪಡಿಸಿದ ಪ್ಯಾಕೇಜ್ ಮಾಡಿದ ಆಹಾರ ನೀಡಲು ಮಾರ್ಗಸೂಚಿ ಹೊರಡಿಸಲಾಗಿದ್ದು, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಮತ್ತು ಟೇಕ್ ಎವೆ ಕಿಟ್ ವಸ್ತುಗಳು ಮಾರಾಟಕ್ಕೆ ಸಿಗುವಂತೆ ಮಾಡಲಾಗಿದೆ, ರೈಲ್ವೆ ಸ್ಟೇಷನ್ ಗಳಲ್ಲಿ ಬಹೂಪಯೋಗಿ ಸ್ಟಾಲ್ ಗಳನ್ನು ಇಡಲಾಗಿದೆ.
ಇನ್ನು ರೈಲ್ವೆ ಇಲಾಖೆ ಪ್ರಸ್ತುತ ದೇಶದಲ್ಲಿ ಸರಾಸರಿ 1,402 ವಿಶೇಷ ರೈಲುಗಳ ಸಂಚಾರ ಮಾಡುತ್ತಿದ್ದು, ಒಟ್ಟು 5 ಸಾವಿರದ 381 ಉಪ ನಗರ ರೈಲು ಸೇವೆಗಳು ಮತ್ತು 830 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ. ಅಲ್ಲದೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ಹೆಚ್ಚು ವಿಶೇಷ ರೈಲುಗಳ ತದ್ರೂಪುಗಳಾಗಿ 28 ವಿಶೇಷ ರೈಲುಗಳನ್ನು ನಡೆಸಲಾಗುತ್ತಿದೆ ಎಂದು ರೈಲ್ವೆ ಹೇಳಿದೆ.