ಬೆಂಗಳೂರು, ಏ. 17 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿದ್ದ ಸಿ.ಡಿ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ್ ಓಕಾ ನೇತೃತ್ವದ ಪೀಠ ಇಂದು ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ್ದು, ಆ ವೇಳೆ, ಪ್ರಕರಣದಲ್ಲಿ ಎಸ್ಐಟಿ ತನಿಖೆ ಮುಂದುವರಿಕೆಗೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಪೀಠವು ಎರಡೂ ಕಡೆಯ ವಾದವನ್ನು ಆಲಿಸಿ ಬಳಿಕ ಅರ್ಜಿದಾರರು ಕೋರಿದಂತೆ ಸಿಬಿಐ ತನಿಖೆಗೆ ವಹಿಸುವುದಾಗಲಿ ಅಥವಾ ಕೋರ್ಟ್ ನಿಗಾದಲ್ಲಿ ನಡೆಸುವ ತನಿಖೆಗೆ ಒಪ್ಪಿಕೊಂಡಿಲ್ಲ. ಅದರ ಬದಲಿಗೆ ಎಸ್ಐಟಿಗೆ ವಿಸ್ತೃತ ತನಿಖೆ ನಡೆಸಿ, ಮೇ 31ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸಲು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಇನ್ನು ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ವಕೀಲರಿಗೆ ಯಾಕೆ ನಿಮಗೆ ಒಳ್ಳೆಯ ತನಿಖೆ ನಡೆಸಲು ಇಷ್ಟವಿಲ್ಲವೇ? ತನಿಖೆ ಪೂರ್ಣಗೊಳ್ಳುವ ಮೊದಲೇ ನಿರ್ಣಯ ಸರಿಯಲ್ಲ ಎಂದು ಕೋರ್ಟ್ ಕೇಳಿದ್ದು, ಆ ಮೂಲಕ ಎಸ್ಐಟಿ ತನಿಖೆ ಬಗ್ಗೆ ತನ್ನದೇನೂ ಅಭ್ಯಂತರವಿಲ್ಲವೆಂದು ಪರೋಕ್ಷವಾಗಿ ನ್ಯಾಯಪೀಠ ಹೇಳಿದಂತಾಗಿದೆ.
ಕೋರ್ಟ್ ನಿಗಾದಲ್ಲಿ ತನಿಖೆ ನಡೆದರೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.