ಬೆಂಗಳೂರು, ಏ.17 (DaijiworldNews/MB) : ''ಕೊರೊನಾ ಸೋಂಕಿಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆಯಾಗಿಲ್ಲ. ಈ ಬಗ್ಗೆ ಸುಮ್ಮನೆ ಕಥೆ ಕಟ್ಟುವುದು ಎಂದು ಬೇಡ'' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿದ ಬಳಿಕ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಲು ಮುಂದಾದರು. ಆದರೆ ಅಲ್ಲಿ ಅವರಿಗೆ ಬೆಡ್ ಸಿಕ್ಕಿಲ್ಲ. ರಾಜ್ಯದ ಓರ್ವ ಪ್ರಭಾವಿ ನಾಯಕನ ಸ್ಥಿತಿಯೇ ಹೀಗಾದರೆ ಇನ್ನು ಸಾಮಾನ್ಯ ಜನರ ಸ್ಥಿತಿ ಏನು ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು.
ಕುಮಾರಸ್ವಾಮಿಗೆ ಬೆಡ್ ಸಿಕ್ಕಿಲ್ಲ ಎಂಬ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಕುಮಾರಸ್ವಾಮಿಗೆ ಬೆಡ್ ದೊರಕಿಸಿಕೊಡಲು ಯತ್ನಿಸಿದ್ದಾರೆ. ಆದರೆ ಬೆಡ್ ಲಭಿಸಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೊಂದು ಖಾಸಗಿ ಆಸ್ಪತ್ರೆಗೆ ಫೋನು ಮಾಡಿ ಅಲ್ಲಿ ಬೆಡ್ ಇದೆಯೇ ಎಂದು ಕಾತರಿ ಪಡಿಸಿ ಅಲ್ಲಿ ದಾಖಲಾಗಿದ್ದಾರೆ ಎಂದು ಕೂಡಾ ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವರು, ''ಮಣಿಪಾಲ್ ಹಾಗೂ ಅಪೋಲೋ ಆಸ್ಪತ್ರೆಗಳಲ್ಲಿ ಹೆಚ್ಡಿಕೆ ಅವರನ್ನು ದಾಖಲಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ನಾನೇ ಖುದ್ದಾಗಿ ಅವರೊಂದಿಗೆ ಮಾತನಾಡಿ ನಿರಂತರ ಸಂಪರ್ಕದಲ್ಲಿದ್ದೇನೆ'' ಎಂದು ಹೇಳಿದರು.