ಬೆಂಗಳೂರು,ಏ 17 (DaijiworldNews/MS): ಕೊರೊನಾ ನಿಯಂತ್ರಣ ಹಾಗೂ ವೈದ್ಯಕೀಯ ವ್ಯವಸ್ಥೆಗಳ ಕೊರತೆ ಬಗ್ಗೆ ಸಿಡಿಮಿಡಿಕೊಂಡಿರುವ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದೆ. "ಸುಳ್ಳು ಹೇಳುತ್ತಾ ಆತ್ಮವಂಚನೆ ಮಾಡಿಕೊಂಡು ಕೂರುವ ಕಾಲವಲ್ಲ ಜನ ಬೀದಿ ಬೀದಿಗಳಲ್ಲಿ ನರಳಾಡಿ ಪ್ರಾಣ ಬಿಡುತ್ತಿದ್ದಾರೆ, ವಾಸ್ತವದ ಸತ್ಯ ಒಪ್ಪಿಕೊಂಡು ಗಂಭೀರವಾಗಿ ಚಿಂತಿಸಿ ಅಗತ್ಯ ಕ್ರಮ ಕೈಗೊಳ್ಳುವ ತುರ್ತು ಸಮಯ" ಎಂದು ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವಿಟ್ ಮಾಡಿದ್ದು, " ಬಿಜೆಪಿಗೆ ಸುಳ್ಳೇ ತಂದೆ, ಸುಳ್ಳೇ ತಾಯಿ! ರಾಜ್ಯಾದ್ಯಂತ ಬೆಡ್ಗಳು, ರೆಮಿಡಿಸಿವಿರ್, ICU, ಲಸಿಕೆ, ಆಸ್ಪತ್ರೆ, ಆಕ್ಸಿಜನ್ ಎಲ್ಲದರ ಕೊರತೆಯಿಂದ ಹಾಹಾಕಾರವೆದ್ದಿದೆ. ಜನ ಬೀದಿ ಬೀದಿಗಳಲ್ಲಿ ನರಳಾಡಿ ಪ್ರಾಣ ಬಿಡುತ್ತಿದ್ದಾರೆ. ಮಾನ ಮುಚ್ಚಿಕೊಳ್ಳುವ ನಿಮ್ಮ ಸುಳ್ಳು ಜನರ ಪ್ರಾಣ ಉಳಿಸದು. ನಿಮ್ಮಿಂದ ರಾಜ್ಯ ಸ್ಮಶಾನವಾಗಿದೆ ಎಂದು ಕಿಡಿಕಾರಿದೆ.
ಆರೋಗ್ಯ ಸಚಿವ ಸುಧಾಕರ್ ಅವರೇ, ಇದು ಸುಳ್ಳು ಹೇಳುತ್ತಾ ಆತ್ಮವಂಚನೆ ಮಾಡಿಕೊಂಡು ಕೂರುವ ಕಾಲವಲ್ಲ.ವಾಸ್ತವದ ಸತ್ಯ ಒಪ್ಪಿಕೊಂಡು ಗಂಭೀರವಾಗಿ ಚಿಂತಿಸಿ ಅಗತ್ಯ ಕ್ರಮ ಕೈಗೊಳ್ಳುವ ತುರ್ತು ಸಮಯ.
ಜನ ನರಳಿ ನರಳಿ ಸಾಯುತ್ತಿದ್ದಾರೆ, ನಿಮ್ಮ ಹೊಲಸು ಸುಳ್ಳುಗಳನ್ನು ಸ್ವಲ್ಪ ಸಮಯದವರೇಗಾದರೂ ಮುಂದೂಡಿ! ಆಗಬೇಕಾದ ಕೆಲಸಗಳನ್ನು ಗಮನಿಸಿ ಎಂದು ಟೀಕಿಸಿದೆ.
ರಾಜ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಆಕ್ಸಿಜನ್ ಸೇರಿದಂತೆ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳ ಕೊರತೆಯಿಂದ ಸ್ಥಿತಿ ಬಿಗಡಾಯಿಸುತ್ತಿದೆ ವಾಸ್ತವದ ಅರಿವಿಲ್ಲದ ಬಿಜೆಪಿ ಸರ್ಕಾರ ಎಚ್ಚರಿಕೆಯ ಮಾತುಗಳನ್ನು ಸುಳ್ಳು ಎಂದು ಬಿಂಬಿಸಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದೆಯೇ ಹೊರತು ಅಗತ್ಯ ಕ್ರಮಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದೆ.